ತೆರೆಗಳೊಡನೆ ತಿಳ್ಳಿಯಾಡಲು ಬಂದ ಗಾಳಿಗೆ
ಬುರುಗಿನ ಬೆಳ್ಳಿಯನಿತ್ತು, ಕಳಿಸಿದ ಸಮುದ್ರರಾಜ:
ಬಿಡಿಸಲು ಬಂದ ಹರಿಗೆ ಕಮಲವನೇರಿಸಲಿಲ್ಲವೆ ಗಜೇಂದ್ರ?
ಮುಗಿಲೊಳಗಿಂದ ಬೆಳಕು ಕರೆವ ದಿನಮಣಿಗೆಂದು
ಬೆಳ್ಳಿ ಕಟ್ಟನೊಂದನಣಿಗೊಳಿಸಿದನು ಸಾಗರಪತಿಯು,-
ಆಕಾಶದರಮನೆಯ ನೀಲಿಮತೆಗೆ ನೆಲಗಟ್ಟೆನಲು!
ನೌಕೆಯು ಸಾಗಿರೆ ನೇರವಾಗಿ ತನ್ನೆದೆಯ ಮೇಲೆ,
ಕ್ಷೀರದಾಗರವಾಗಿ ಸುಗಮವಾಗಿಸಿದ ಪಥವ,-
ಮಳೆಬಿಲ್ಲುಗಳಿಂದ ಮಜ್ಜನಗೊಳಿಸಿದ ಕಡಲೊಡೆಯ!
ಬೆಳಗ ಬಂದವನನ್ನು ಮುಳುಗಿಸುವದಿಲ್ಲ.
ಮುಳಗ ಬಂದವನಿಗೆ ಬೇಡೆನ್ನುವದಿಲ್ಲ.
ದೇವನಂತೆ ಅನಾಸಕ್ತನಿವ, ಸಮುದ್ರರಾಜ!
ಇವನಲ್ಲದೆ ಚಿರಂಜೀವಿ ಯಾರು?
*****

















