ಮೂಲ: ಸಮರೇಂದ್ರಸೇನ್ ಗುಪ್ತ
ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ,
ನಿಂತೆ ಬದಿಯಲ್ಲಿ.
ಪ್ರಮುಖ ವ್ಯಕ್ತಿ ಯಾರೋ
ಹೋಗಲಿರುವಂತಿತ್ತು ರಸ್ತೆಯಲ್ಲಿ;
ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು
ತಡೆಯಲಾಗಿತ್ತು.
ನಾನು ಇದ್ದದ್ದೊ ಆ ರಸ್ತೆ ಬದಿಯಲ್ಲಿ,
ಆದರೇನಂತೆ?
ದೊಡ್ಡ ವ್ಯಕ್ತಿ ಹೀಗೆ ಹೋಗುತ್ತಾರೆಂದರೆ
ರಸ್ತೆ ಮಾತ್ರವೆ ಏನು, ರಸ್ತೆ ಬದಿ ಕೂಡ
ಖಾಲಿಯಾಗಲೆಬೇಕು.
ಆದರೆ ಆ ಮರಗಳು
ಮುಂಚೆ ಎಲ್ಲಿದ್ದುವೋ ಅಲ್ಲೇ ನಿಂತಿದ್ದುವು.
ಅವಕ್ಕೆ ಆಳದ ಬೇರು,
ಋತು ಋತುಗೆ ತಪ್ಪದೆ
ಎಲೆ ಚಿಗುರಿ ಹೂ ತುಂಬಿ
ಯಾರೇ ಆದರೂ ಏನು
ಬಳಿ ನಿಂತವರ ಮೇಲೆ ನೆರಳು ಹಾಸುವ ಗೀಳು.
ನನಗೆ ಬೇರುಗಳಿಲ್ಲ, ಒರಟು ತೊಗಟೆಯೂ ಇಲ್ಲ,
ಮನುಷ್ಯನಲ್ಲವೆ ಹೇಳಿ?
ನಡತೆ ಸಂಸ್ಕೃತಿ ನೀತಿ ಗಾಂಭೀರ್ಯ ಇರುವವ.
ಯಾರೋ ಪ್ರಮುಖ ವ್ಯಕ್ತಿ
ರಸ್ತೆ ಮೂಲಕ ಹಾದು ಹೋಗುತ್ತಾರೆಂದರೆ
ಸಕಲ ವಿಧೇಯತೆಯಲ್ಲಿ ಬದಿ ಸರಿದು ನಿಲ್ಲುವುದು
ನನಗೆ ಧರ್ಮ.
ರಸ್ತೆ ಹಿಂದೆಂದೂ ಹೀಗೆ ಖಾಲಿಯಾಗಿರಲಿಲ್ಲ.
ದೇವರ ಉತ್ಸವ ಬಂದ ಹೊತ್ತಿನಲ್ಲೂ ಕೂಡ.
ಯೋಚಿಸುತ್ತಿರುವಂತೆ ರಕ್ತ ಬಿಸಿಯಾಯಿತು
ಆದರೂ ತೆಪ್ಪಗೆ
ದಾರಿ ಬದಿ ಬಿಟ್ಟು ಆಚೆ ಕಡೆ ನಡೆದೆ
ತಮ್ಮ ವಿಧೇಯ ಎಂದು ರುಜು ಮಾಡಿದೆ.
*****
















