ಯಾವ ಹೆಸರಿನಿಂದ ಕರೆಯಲೇ ನಿನಗೆ
ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ|
ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ
ನಿನ್ನ ಹೆಸರು ನನಗೆ ಗೊತ್ತೇ ಇಲ್ಲ
ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ|
ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ
ಪೀಡಿತಗಳ ನ್ಯಾಯಕ್ಕೆ ದಿಲ್ಲಿಯಿನ್ನೂ ಮಲಗಿಲ್ಲ
ಜಾರಿಯಿದೆ ನ್ಯಾಯದ ಹಕ್ಕಿನ ಹೋರಾಟವಿನ್ನೂ
ಗಡಿಗಳಲ್ಲೂ ಸಲ್ಲುತ್ತಿದೆ ಮೌನ ಶೃದ್ಧಾಂಜಲಿ
ಉರಿವ ಕೊಳ್ಳಿ ಹಿಡಿದು ಮನಕಲಕುವ ಪ್ರಾರ್ಥನೆ|
ನಿರಂತರ ಉರಿಯುತ್ತಿರುವ ಈ ಕೊಳ್ಳಿ ಮೇಲಾಣೆ
ಇಷ್ಟಿಷ್ಟೇ ನಿಂತು ಹೋದ ನಿನ್ನ ಉಸಿರಿನಾಣೆ
ಹೊತ್ತಿದ ಬತ್ತಿಗಳು ಉರಿಯಲೇಬೇಕು
ಹೋರಾಟಕೆ ಪ್ರತಿಫಲ ದೊರಕಲೇಬೇಕು
ಒಂದು ದಿನ… ಆ ಒಂದು ದಿನ
ಕಂಡೇ ಕಾಣುವೆವು ನಿನ್ನ ಕಣ್ಣಲ್ಲಿ ನಕ್ಷತ್ರ ಬೆಳಕ|
ದುಃಖದ ಸುನಾಮಿ ಅಲೆಗಳು ಅಪ್ಪಳಿಸುತ್ತಿವೆ
ನೀನಿರುವಲ್ಲಿಂದಲೇ ಒಮ್ಮೆ ಇಣಕಿ ನೋಡು ದಾಮಿನಿ
ಎಲ್ಲರ ಮನದಲಿ ನೀನು ಜೀವಂತವಾಗಿರುವೆ
ಮಾನಿನಯರ ಮಾನ ಕಾಯಲು ಕಾರಣವಾಗಿರುವೆ
ನಿನ್ನಾಣೆ ನಿನ್ನ ನಿಲ್ಲುತ್ತಿರುವ ಉಸಿರಿನಾಣೆ
ಹುಸಿಯಾಗದು ಲಕ್ಷಾಂತರ ಜನರ ಪ್ರಾರ್ಥನೆ.
ಹೋರಾಟದ ದೈತ್ಯ ಅಲೆಗಳ ಮುಂದೆ
ಯಾವ ಶಕ್ತಿಯೂ ನಿಲ್ಲಲಾರದು ನೋಡು
ಹಕ್ಕು ಪಡೆದೇ ತೀರುವ ಛಲವಿದೆ
ಉರಿವ ಕೊಳ್ಳಿ ಹಿಡಿದ ಹೊಸ ವರ್ಷದ ಬೆಳಗು
ಪೀಡಿತ ಹೆಣ್ಣುಗಳಿಗೆ ಸಮರ್ಪಿತ ನೋಡು
ಲೋಕವೇ ಏನಾಗಿದೆ ನಿನ್ನ ಕರುಳಿಗೆ
ದಾಮಿನಿಯ ಉಸಿರು ವ್ಯರ್ಥವಾಗಬೇಕೆ?
ಅವಳು ಬದುಕಿದ್ದಾಳೆ ನನ್ನಲಿ ನಿನ್ನಲಿ ಎಲ್ಲರಲಿ
ಧೈರ್ಯ ಸಾಹಸದ ಕುರುಹಾಗಿ,
ಜೀವನೋತ್ಸಾಹದ ಚಿಲುಮೆಯಾಗಿ
ಬರುವ ನಾಳೆಯ ಭರವಸೆಯ ಬೆಳಕಾಗಿ|
ಹೀಗೆಯೇ ಬಿಡಲಾರೆವು ಆ ಬಲತ್ಕಾರಿಗಳನ್ನು
ಎದೆ ಮೆಟ್ಟಿ ನ್ಯಾಯ ಕೇಳುವ ಬಲವಿದೆ.
ಹಕ್ಕು ಪಡೆದೇ ತೀರುವ ಛಲವಿದೆ.
ಗಲ್ಲು ಶಿಕ್ಷೆ ನೀಡಿಯೇ ತೀರುತ್ತೇವೆ
ಬಲತ್ಕರಿಸಿ, ಸಾಯಿಸಿದ ಎಲ್ಲ ಸೀತೆಯರ ಲೆಕ್ಕ
ಚುಕ್ತಾ ಮಾಡುತ್ತೇವೆ ಇಲ್ಲಿಯೇ ಈ ಭೂಮಿ ಮೇಲೆಯೆ|
*****


















