ಎಡೆಬಿಡದೇ ಸುರಿದ ಮಳೆಗೆ
ತತ್ತರಿಸಿದ ಮುಂಬೈ ನಗರಿ
ಚೇತರಿಸಿ ಉಸಿರಾಡುತ್ತಿದ್ದಂತೆಯೇ
ಒಂದರ ಹಿಂದೊಂದರಂತೆ
ಸರಣಿ ಬಾಂಬುಗಳ ಸ್ಪೋಟ
ದುರಂತಗಳ ಮಧ್ಯದಲ್ಲಿಯೇ
ಎದ್ದು ನಿಲ್ಲುತ್ತದೆ ಮುಂಬೈನಗರಿ
ಪಿನಿಕ್ಸ್ ಹಕ್ಕಿಯ ಸಾವಿನಂತೆ
ಮತ್ತೆ ಮತ್ತೆ ಸತ್ತು ಬದುಕುತ್ತದೆ
ಮಾಯಾ ನಗರಿ.
ಹಲವಾರು ಜನಾಂಗಗಳು, ಭಾಷೆಗಳು
ಸೌಹಾರ್ದತೆಯಿಂದ ಬದುಕಿವೆಯಿಲ್ಲಿ
ಕಂಡಿವೆ ಬಿನ್ನತೆಗಳ ಮಧ್ಯೆ ಏಕತೆ
ವಾಣಿಜ್ಯ ನಗರಿಯ ಗರ್ಭದಲ್ಲಿಯೇ
ದುರಂತಗಳ ಅಂಧೇರಿ ನಗರಿ
ಕತ್ತಲೆಯಲ್ಲೂ ಝಾಗಝಾಗಿಸುತ್ತದೆ
ಈ ಮಾಯಾ ನಗರಿ ಮಲಗುವುದೇ ಇಲ್ಲ
ಒತ್ತಡಗಳಲ್ಲಿಯೇ ಬದುಕುತ್ತದೆ.
ಥಳುಕು ಬಳುಕಿನ ಬಾಲಿವುಡ್
ತಾರೆಗಳ ಲೋಕ ಇಲ್ಲಿಯೇ ಇದೆ:
ಭೂಗತ ಜಗತ್ತು ಹೆಣೆದ
ಸಾವಿನ ಸುಳಿಗಳೂ ಇಲ್ಲಿಯೇ ಇವೆ.
ದುರಂತ, ತಲ್ಲಣಗಳ ಮರುಕ್ಷಣವೇ
ಬದುಕು ಚಿಗಿಯುತ್ತದೆ ಇಲ್ಲಿ
ವಿಚಲಿತವಾಗದೆಂದೂ ಸ್ಪೋಟಗಳಿಗೆ
ಎದೆ ನಡುಗಿಸುವ ಶಬ್ದಕ್ಕೂ ಹೆದರದೇ
ಜನಜಂಗುಳಿಯ ಹೊತ್ತು ಮುನ್ನಡೆವ
ಲೋಕಲ್ ಟ್ರೇನುಗಳು ಸಾಲು ಸಾಲು
ಒಂದು ಕ್ಷಣ ಗಕ್ಕನೆ ನಿಂತರೆ ಟ್ರೇನು
ಬದುಕು ಸ್ಥಬ್ಧವಾಗುವುದು ಇಲ್ಲಿ.
ಸಾವಿನ ಕರಿನೆರಳುಗಳ ದಾಟಿದರೆ
ಸ್ಫೋಟದ ಶಬ್ದಕ್ಕೆ ಹರಿದ ಕಿವಿಪಟಲ
ಸಾವು ನೋವಿನ ಆರ್ತನಾದ.
ಭೂಗತ ಉಗ್ರರ ಅಟ್ಟಹಾಸ
ಸರಣಿ ಬಾಂಬುಗಳ ಸ್ಫೋಟ
ಯಾವ ಸಾಧನೆಗಾಗಿ?
ಕೂಡಿ ಬಾಳಿದ ಮುಂಬೈಗೆ
ಅನಾದಿಕಾಲದ ಇತಿಹಾಸವಿದೆ.
ಮಾನವೀಯತೆಯ ಉನ್ನತ ಗುಣವಿದೆ.
ಹಂತಕನಿಗೆ ದೇವರಿಲ್ಲ, ಧರ್ಮಗಳಿಲ್ಲ
ಹಿಂಸೆಯ ಆಯುಷ್ಯವೂ ಅತ್ಯಲ್ಪ.
ಕೊಲ್ಲುವ ಹಂತಕನಿಗೂ ಸಾವು ನಿಶ್ಚಿತ.
*****



















