ಆಡುವ ಭಾಷೆಯೂ ರಾಜಕೀಯ ವಿಷಯವಾಗಿದೆ
ಗೂಂಡಾಗಳ ಕೈಯಲ್ಲಿ ಕೂಡುಗತ್ತಿಯಾಗಿದೆ.
ಗಾಂಧಿ, ಅಬ್ದುಲ್ ಗಫಾರ್, ನೆಹರೂರವರನು
ಹಾದಿ ಬೀದಿಯಲ್ಲಿ ಅವಮಾನಿಸುತ್ತಿದ್ದಾರೆ
ಜೇಬುಗಳ್ಳರಿಗಿಲ್ಲಿ ತುಂಬು ಗೌರವದ ಧಿರಿಸು
ಒಳ್ಳೆಯವರಿಗಿಲ್ಲಿ ಕಾಲ ಎಲ್ಲಿದೆ ಹೇಳು?
ಗುಲಾಬಿ ಹೂವಿನ ತುಟಿಗಳ ಮೇಲೆಯೂ
ವಿಷದ ಛಾಯೆ, ದ್ವೇಷದ ಕಿಡಿಯಿದೆಯಲ್ಲ!
ಎಂತಹ ಮಂದಿರ, ಮಸೀದಿ, ಚರ್ಚು ಹೇಳು?
ಎಲ್ಲವೂ ರಾಜಕೀಯ ಧಂದೆಯಾಗಿದೆಯಲ್ಲ!
ದೇವರು, ಧರ್ಮ, ರಾಜಕೀಯ ದಾಳವಾಗಿ
ಹೆದರಿಸುವ ಅವರ ಪರಿ ನೋಡು!
ಮಾರಕಾಸ್ತ್ರಗಳ ಹಿಡಿದು ಅವನು
ಭೂಪಟದ ತುಂಬಾ ಬಾಂಬಿನ ಬೀಜ ಬಿತ್ತುತ್ತಿದ್ದಾನೆ
ಹೂವು ಅರಳುವುದಿಲ್ಲ ಅವನ ಹೊಕ್ಕಳ ನಾಭಿಯಲ್ಲಿ
ಜೀವರಸ ಉಕ್ಕಿ ಹರಿಯುವುದಿಲ್ಲ ಹೃದಯದಲ್ಲಿ
ಪ್ರೀತಿ ಪುಟಿಯುವುದಿಲ್ಲ ನಾಲಿಗೆಯ ಮಾತುಗಳಲ್ಲಿ
ಹಸಿ ತೇವವಿಲ್ಲ, ಹಸಿರು ಚಿಗಿಯುವುದಿಲ್ಲ,
ಬರೀ ಗೋರಿಗಳ ಬಿಕ್ಕಳಿಕೆ ತುಂಬಿದೆಯಲ್ಲ.
ಭಾಷೆಯೂ ರಾಜಕೀಯದ ಅಸ್ತ್ರವಾಗಿದೆಯಲ್ಲ!
*****


















