ಈ ನಮ್ಮ ಗಂಗಾವತಿಯ ಪ್ರಾಣೇಶ್, ಮೈಸೂರಿನ ಕೃಷ್ಣಗೌಡರು. ರಿಚರ್ಡ ಲೂಯಿಸ್, ನರಸಿಂಹ ಜೋಯಿಸ್, ಸುಧಾ ಬರಗೂರು ಮುಂತಾದವರೆಲ್ಲ ಜನರನ್ನು ನಗಿಸಲೆಂದೇ ಹುಟ್ಟಿದವರು.
ಇವರೆಲ್ಲ ನಿತ್ಯ ನಗೆಯ ಟಾನಿಕ್ ಕೈಯಲ್ಲಿ ಹಿಡಿದು ಕುಡಿಯುತ್ತಾ ಜನರಿಗೆ ಕುಡಿಸುತ್ತಾ ಸಂಭ್ರಮಿಸುವ ಸಜ್ಜನರು.
ಈವತ್ತು ಕಾಲ ಯಾವ ಮಟ್ಟಕ್ಕೆ ಹೋಗಿದೆಯೆಂದರೆ… ‘ನಗರಿ ನಗಿಸಿರಿ ಬಾಳಿ ಬದುಕಿ ಕನ್ನಡ ಕಲಿಯಿರಿ ಕಲಿಸಿರಿ…’ ಎಂದು ಜನರ ಮುಂದೆ ಬೊಬ್ಬೆ ಹೊಡೆಯೋ ಕಾಲ ಬಂದು ಬಿಟ್ಟಿದೆ.
ಅವರ ನಗೆಯ ಹಬ್ಬದಲ್ಲಿ ಪಾಲ್ಗೊಂಡು “ನಾನು ನಗಲಿಲ್ಲ. ನನ್ನ ನಗಿಸಲು ಅವರ ಕೈಲಿ ಆಗಲಿಲ್ಲ” ಎಂದು ಯಾರಾದರು ಹೇಳಿದರೆ ಅವರಿಗೆ ನಗದು ರೂಪದಲ್ಲಿ ಬಹುಮಾನ ಸನ್ಮಾನ ಮಾಡುವುದಾಗಿ ಇವರೆಲ್ಲ ಸಾರಿಕೊಂಡಂತೇ ನಗಿಸುವಲ್ಲಿ ನೂರಕ್ಕೆ ನೂರರಷ್ಟು ಫಲಪ್ರದವಾಗಿದ್ದಾರೆ.
ಒಮ್ಮೆ ನಕ್ಕರೆ ಹಾಲು ಸಕ್ಕರೆ ದಿನವೂ ನಕ್ಕರೆ ಆಯುಷ್ಯ ಹೆಚ್ಚುರೀ. ವರ್ಷದೂದ್ದಕ್ಕೂ ನಕ್ಕರೆ ಡಾಕ್ಟರ್ ದೂರಾರೀ… ಜೀವನದಲ್ಲಿ ಇದಕ್ಕಿನ್ನಾ ಇನ್ನೇನು ಬೇಕೂರೀ… ?!
ಮುಖ ಗಂಟಿಟ್ಟುಕೊಂಡು ಇರುವುದರಿಂದ ದೇಹದಲ್ಲಿರುವ ರಸದೂತಗಳು ಹಾರ್ಮೋನುಗಳು ಸುಪ್ತವಾಗಿರುತ್ತವೆ. ಸೋಂಕು ಪ್ರತಿರೋಧಕ ಕೋಶಗಳ ಸಂಖ್ಯೆಯನ್ನು ಕುಗ್ಗಿಸುತ್ತಾ ಹೋಗುವುದು. ಎಂಡಾರ್ಫಿನ್ ರಾಸಾಯನಿಕಗಳು ಬಿಡುಗಡೆಯಾಗುವುದಿಲ್ಲ.
ಒಂದೇ ಒಂದು ನಗು ಮನಸ್ಸು ಬಿಚ್ಚಿ ನಕ್ಕು ಬಿಟ್ಟರೆ ಇವೆಲ್ಲ ಸುಗಮವಾಗಿ ಕೆಲಸ ಮಾಡಲು ಶುರುವಾಗುತ್ತವೆ.
ರಕ್ತ ಸಂಚಾರ ಹೆಚ್ಚಿ ಹೃದಯದ ಆರೋಗ್ಯ ಹೆಚ್ಚಿ ಮೆದುಳು ಚುರುಕಾಗಿ ಬುದ್ಧಿಯ ವೇಗ ಹೆಚ್ಚುವುದು.
ನಗುವೊಂದು ಆಭರಣ. ಮನಸ್ಸನ್ನು ಲಕಲಕ ಹೊಳೆಯುವಂತೆ ಮಾಡುವುದು. ನಾನು ಆರೋಗ್ಯವಾಗಿದ್ದೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ನನ್ನಲ್ಲಿಯೂ ಶಕ್ತಿಯಿದೆ. ಸಾಧಿಸಿ ತೋರಿಸುವೆ ಎಂಬ ಹುಮ್ಮಸ್ಸು ಒಂದು ನಗು ನೀಡುವುದು. ಏನೆಲ್ಲ ನಿವಾರಿಸುವ ಶಕ್ತಿಯುಕ್ತಿ ಹುರುಪು ಉತ್ಸಾಹ ನಗುವಿಗಿದೆ.
ಒಂದು ನಗು ಸಾಧಿಸಿದ್ದನ್ನು ನೂರು ಹಗೆ ಸಾಧಿಸಿಲ್ಲ! ಎಂಬುದನ್ನು ನಾವೆಲ್ಲ ನೆನೆಯುತ್ತಾ ನಗುನಗುತ್ತಾ ನೂರಾರು ವರ್ಷ ಬಾಳಿದರೆ ಚೆನ್ನಲ್ಲವೇ? ನಿಜವಾದ ಚಿನ್ನ, ರನ್ನ, ಮುತ್ತು, ಹವಳವಲ್ಲವೇ?
ಇವರೆಲ್ಲ ನಗೆಯ ಆಭರಣಗಳನ್ನು ಬಳ್ಳದಿಂದ ಊರಿಂದ ಊರಿಗೆ ಅಳೆದು ಮಾರುತ್ತಿರುವರು ಕೊಳ್ಳಿರಿ ನಗೆಯ ಸಿರಿಯ ಹರಿಯ ತೊರೆಯ…
*****


















