
೧
ನನ್ನ ನಾಡ ಚೆನ್ನ ನಾಡ
ಬನ್ನ ಬಡುತ ಪೊರೆಯುವ
ನನ್ನಿಯಿಂದ ತಾಯಿನಾಡ
ಹೊನ್ನ ಸಿರಿಯ ಬೆಳಗುವ
೨
ನಾಡ ಬವರ ಬವಣೆಯಲ್ಲಿ
ಜೀವವನ್ನು ನೀಡುವ
ಹೇಡಿತನವ ಹೊಡೆದು ಹಾಕಿ
ರೂಢಿಯಲ್ಲಿ ಮರೆಯುವ
೩
ನಾಡನುಡಿಯ ನಾಡನಡೆಯ
ನಾಡಿನಲ್ಲಿ ನಡಿಸುವ
ಕಾಡುತಿರುವ ಕಾಡು ಜನರ
ಕೋಡು ತಾನೆ ಉಡಿಯುವ
೪
ನಾಡಮೇಲೆ ನೋಡಿಯೊಡಲು
ಪೊಡವಿಯೊಡೆಯನಡಿಯಲಿ
ಬೇಡಿಕೊಂಡು ಪೊಡವಿಗಿಳಿದು
ಬಡವಂಗೆ ಬಡಿಸಲಿ
೫
ಚತುರತನದೆ ಜಾತಿಮತವ
ರೀತಿನೀತಿಗಿಳಿಸುವ
ಜಾತಿಮತಕೆ ಸೋತುಬಿದ್ದ
ಮಾತೆಯನ್ನು ಎತ್ತುವ
೬
ಜಾತಿಬೆಳೆಸಿ ಆತುಕೊಂಡು
ಘಾತಿಸಿರ್ಪ ಜನರನು
ಭೀತಿ ಬಿಡಿಸಿ ಕೂತುಬಿಟ್ಟು,
ಸಾತಿಶಯದೆ ಮೆರೆಯುವ
೭
ನನ್ನ ಮಾತು ನಿನ್ನ ಮಾತು
ಹೊನ್ನ ಮಾತದೆನ್ನದೆ
ಉನ್ನತಾಗ್ರಸಭೆಯಮಾತು
ಮನ್ನಿಸೆಲ್ಲ ನಡೆಯುವ
೮
ಕಾವನನ್ನು ಕಾಂಬ ಬಗೆಯ
ಕಾಣೆ ಬೇರೆ ತೆರದಲಿ
ನಾಡ ಸೇವೆಗಾಗಿ ತನುವ
ನೀಡೆ ದೇವ ಕಾಂಬನು
೯
ದೇವರಿಂದ ಬಂದ ನಾವು
ದೇವರಾಗಿ ಮೆರೆಯುವ
ಜೀವಕಂಜಿ ಹೆದರಿ ಹೆದರಿ
ಸಾವ ಜನರ ಕರೆಯುವ
೧೦
ನಾಡಧರ್ಮ ರೂಢಿಯಲ್ಲಿ
ನಾಡೆ ತಾನೆ ನಡಿಸುವ
ನಾಡದೇವಿ ಬೀಡಿನಲ್ಲಿ
ಕೂಡಿಯಾಡಿ ಮರೆಯುವ
*****


















