ದುಃಖಾಶ್ರುವಿನ ಪಸರದಿಂದ ಜನಿಸಿದ ಮಂಜು,
ಅಜ್ಞಾನದಾವರಣ, ಕನವರಿಕೆ ಅನುತಾಪ-
ದಲಿ ಕಳೆವ ಸಂತಸವು, ಸಿರಿಯೆಂಬ ಹಿರಿನಂಜು,
ಬಟ್ಟಬಯಲಾಗುತಿಹ ಪ್ರೀತಿಯೆಂಬೀ ಧೂಪ
ನಮ್ಮ ಭಾವನೆ ತಂದ ಮೇಲುಬೆಳಕಿನಭಾವ
ನಿಷ್ಕರುಣೆ, ಇದರಿಂದ ಕುರುಡಾಗಿಹುದು ಕಾಣ್ಕೆ.
ಜೀವದಮರಾಪಗೆಯು ತೊರೆದು ತನ್ನಯ ರಾವ
ಮಳಲಿನಲಿ ಹಿಂಗುವಳು, ಇದುವೆ ನಮ್ಮಯ ಮಾಳ್ಕೆ !

ಬರಿದಾದ ಎದೆ, ಶೂನ್ಯವಿಹ ದಿಶೆಯು, ನಿರ್ಗತಿಕ-
ರಳುದನಿಯು : ಇದರಲ್ಲಿ ಮಸಣವನೆ ಹೊಂದಿದವು
ಎದೆಯ ತೃಷೆಯನು ಹಿಂಗಿಸುವ ಬುಗ್ಗೆಗಳು; ಪಥಿಕ-
ರನು ಪೊರೆವ ದಾರಿಕೈದೀವಟಿಗೆ ನಂದಿದವು !
ದೇವನಿತ್ತಿಹ ಕನಸುಗಳು ದಿವ್ಯಲೀಲೆ, ಕಂದ !
ನೋಡು ನರನವಕೆಲ್ಲ ಸಿಡಿಲೆರಗಿಸಿರುವಂದ !
*****