ಬಿಸಿಲ ಸೂರ್‍ಯನ ಕಾವು ತಟ್ಟಿ
ಕರುಳ ಬಳ್ಳಿಯ ಹೂವು ಬಾಡಿ
ಶಂಕೆಯಿದ್ದರೆ ಶೋಧಿಸಿ ನೋಡಿರಿ
ನನ್ನ ಮನೆ, ಮಾಡು, ಮೂಲೆ, ಗೂಡು
ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ
ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ.
ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ
ಅಲ್ಲಿ ಪೂರ್‍ವಿಕರ ಜೋಗುಳ ಕೋಶವಿದೆ.
ಮಳೆ, ಮೋಡ, ಮೋಳಕೆಯಲ್ಲಿ ಶೋಧಿಸಿರಿ
ಸಿಡಿಲು, ಮಿಂಚು, ಗುಡುಗಿನ ಶಬ್ದದಲ್ಲಿ
ಸೂರ್‍ಯ ಚಂದ್ರರು ಸಂಧಿಸುವಲ್ಲಿ.

ತುತ್ತು ತುತ್ತಿಗೂ ಬೆವರ ಬಿತ್ತುವ
ಒಡಲಧಗೆ ನಂದಿಸುವ ಶ್ರಮಿಕನವನು.
ಕರುಳ ಬತ್ತಿಯ ಹೊಸೆದು ದೀಪ ಹಚ್ಚುವನು.
ಬಿರುಗಾಳಿಗೆ ಆರಿ ಹೋಗದಂತೆ
ಒಡಲೊಳಗಿನ ಕೆಂಡದ ಕನಸುಗಳಿಗೆ
ಕಿಡಿ ತಾಗದಂತೆ ಅಡ್ಡಗೋಡೆಯಾದವನು.

ಧರೆ ಹೊತ್ತಿ ಉರಿಯದಂತೆ
ಕಣ್ಣಾಳದ ಆಕಾಶ ನೆಲಕಚ್ಚದಂತೆ
ಕೊಲೆಕಗಡುಕರ ಸಂತೆ ಮೈದಾನದಲ್ಲಿ
ನಾಳೆಗಳು ಸುಟ್ಟು ಕರಕಲಾಗದಂತೆ
ಮುಳ್ಳುಗಳು ಚುಚ್ಚದಂತೆ ಎಚ್ಚರದಲಿ,
ಧರೆಯ ಭಾರಕ್ಕೆ ಹೆಗಲ ನೀಡಿದವನು.

ಭಯ ತುಂಬಿದ ಮುಖ ಬಿಳಿಚಿಕೊಂಡಿದೆ
ರಕ್ತ ಹೆಪ್ಪುಗಟ್ಟುತ್ತಿದೆ ಸ್ಫೋಟದ ಶಬ್ದಕೆ
ಎಲುಬಿಗೂಡಿನ ಹಂದರಗಳು ನಲುಗಿವೆ
ಗೋರಿಯಿಂದೆದ್ದ ಮೋಡ ಕಂಬನಿ ಸುರಿಸಿ
ಕೇಳುತ್ತಿದೆ ಹೇಳು ವ್ಯಾಘ್ರನೆ
ಸಿಡಿಮದ್ದಿಗೆ ಸಮುದಾಯದ ಬಲಿಯೇಕೆ?
ನೆಲದ ಮೇಲೆ ನರಮಂಡಲದ ಬಳ್ಳಿಯಿದೆ.
ನೇಣುಗಂಬದಲ್ಲಿ ನಿರಪರಾಧಿ ಬೇರುಗಳು
ರಕ್ತದೋಕುಳಿಯಲ್ಲಿ ತೊಯ್ಯಬೇಕೇಕೆ?
ಶಸ್ತ್ರಾಸ್ತ್ರಗಳು ನಾಗರೀಕತೆಯ ಕುರುಹುಗಳಲ್ಲ
ನಾಟಿ ಔಷಧಿಯೂ ಅಲ್ಲ, ಬುದ್ಧನ ಬೆಳಕು ಅಲ್ಲ,
ಪ್ರವಾದಿಗಳ ಹಿತನುಡಿಯೂ ಅಲ್ಲ
ಬಂದೂಕಿನ ನಳಿಕೆಯಲಿ ಕೊಳಲಿನ ಗಾನ
ಬದುಕಿನ ಕನಸುಗಳಿವೆ ಜೋಪಾನ!

ಬೆಟ್ಟದೆತ್ತರಕ್ಕೆ ಬಿದ್ದ ಹೆಣರಾಶಿಯಿಂದ
ಅರೆಜೀವಗಳ ನಾಬಿಯಾಳದ ಸಂಕಟ
ನೋವಿನ ಕಿಡಿಗಳ ನೇರ ನೋಟ
ಕಾಲನ ಹಾಲಾಹಲದ ಮುನ್ಸೂಚನೆಯೇ?
ದೇಶದ್ದುದ್ದಗಲಕ್ಕೂ ಸಂಚಾರ ಹೊರಟ ಭಸ್ಮಾಸುರ

ಜನಾಂಗೀಯ ದ್ವೇಷ ಬೆಳಸಿದ್ದು ಸಾಕು.
ಓಟಿನ ಬೇಟೆಯ ಲೆಕ್ಕಚಾರದಲ್ಲಿ
ಬೆನ್ನಹುರಿಗೆ ಸಿಡಿಮದ್ದು ಸಿಕ್ಕಿಸಿಕೊಂಡಿಹನು
ಚರ್‍ಚು, ಮಠ, ಮಸೀದಿಗಳ ಶಿಖರಕ್ಕೆ
ನೆತ್ತರು ಕಲೆಗಳಿವೆ-ಅತ್ತರು, ಉದುಬತ್ತಿಗಳಿವೆ.

ಅನಾಥ ಮಗುವಿನ ತುಟಿಯಲ್ಲಿ ನಗುವಿಲ್ಲ
ತುಕ್ಕು ಹಿಡಿದಿದೆ ಬುದ್ದಿಗೆ ಆತ್ಮಸಾಕ್ಷಿಗೆ
ಲೋಕದಲಿ ಮುಗಿದಿಲ್ಲ ಯುದ್ಧವಿನ್ನೂ
ಕ್ಯಾತೆ ತೆಗೆಯುತ್ತಲೇ ಇದ್ದಾನೆ ಠೇಕೇದಾರ.
ಮುಗಿಲಮೋಡಗಳು ಸಾಗರದಾಚೆ ನಿಂತು
ನೆತ್ತರ ಕಂಬನಿ ಸುರಿಸಿ ಬಿಕ್ಕುತ್ತಿವೆ.
ಧ್ಯಾನ ಗೋರಿಯಿಂದ ಹೊರ ಬಂದ ಬೆಳ್ಳಕ್ಕಿ
ಕಾಲದ ಗಂಟೆ ಬಾರಿಸಿ ಕೇಳುತ್ತಿದೆ.
ಒಬ್ಬನ ತಪ್ಪಿಗೆ ಸಮುದಾಯದ ಬಲಿಯೇಕೆ?
ನೇಣುಗಂಬದಲಿ ನಿಲ್ಲಿಸಿದ ಠೇಕೇದಾರನೇ ಹೇಳು
ಹೇಳುವದಾದರೆ ಅಪರಾಧಿಯ ಹೆಸರು.
ಸಮುದಾಯವನು ಸೂಲಿಗೇರಿಸುವ ಛಲವೇಕೆ?
ಮುಖ್ಯ ವಾಹಿನಿ ಛಿದ್ರಗೊಳಿಸುವ ಹುನ್ನಾರವೇಕೆ?
*****