Home / ಕವನ / ಕವಿತೆ / ಶಕುನಿಯ ಜೂಜು

ಶಕುನಿಯ ಜೂಜು

-ಪರಾಕ್ರಮಿಗಳಾದ ಪಾಂಡವರನ್ನು ಬಗ್ಗುಬಡಿಯಲು ಮೋಸದ ದಾರಿಯನ್ನು ಹುಡುಕಿದ ದುರ್ಯೋಧನನು, ತನ್ನವರೊಂದಿಗೆ ಮಾತಾಡಿ ದುಷ್ಟಯೋಜನೆಯೊಂದು ರೂಪಿಸಿದನು. ಶಕುನಿಯ ಸಲಹೆಯ ಮೇರೆಗೆ ತಂದೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಪಾಂಡವರನ್ನು ಆತಿಥ್ಯ ಸ್ವೀಕರಿಸಲು ಹಸ್ತಿನಾಪುರಕ್ಕೆ ಬರುವಂತೆಯೂ ವಿನೋದಕ್ಕಾಗಿ ಜೂಜಿನ ಕ್ರೀಡೆಯನ್ನು ಏರ್ಪಡಿಸಿರುವುದಾಗಿಯೂ ಹೇಳಿಕಳುಹಿಸುವಂತೆ ತಿಳಿಸಲು, ಧೃತರಾಷ್ಟ್ರನು ವಿದುರನನ್ನು ಬರಹೇಳಿ, ಪಾಂಡವರನ್ನು ಕರೆತರುವ ಜವಾಬ್ದಾರಿಯನ್ನು ವಹಿಸಿದನು. ಪಂಚಪಾಂಡವರು ರಾಜಧರ್ಮವೆಂಬಂತೆ ದೌಪದಿಯೊಂದಿಗೆ ಹಸ್ತಿನಾಪುರಕ್ಕೆ ಆಗಮಿಸಿದರು-

ಪಾಂಡವರೇಳಿಗೆ ಸಹಿಸದ ಕೌರವ ಶಕುನಿಯೊಡನೆ ಸಂಚನ್ನು ಹೂಡಿ
ತಂದೆ ಧೃತರಾಷ್ಟ್ರನೊಪ್ಪಿಗೆ ಪಡೆದನು ಜೂಜಾಡಲು ಧರ್ಮನ ಕೂಡಿ
ರಾಜನು ವಿದುರನ ಸಂಗಡ ತಿಳಿಸಲು ಬೇಡವೆಂದನವ ಭಯದಿಂದ
ರಾಜನಾಜ್ಞೆಯನು ಮೀರಲು ಆಗದೆ ಪಾಂಡವರೆಲ್ಲರ ಕರೆತಂದ!
ಕುರುಯುವರಾಜನ ಸಂಚನು ಅರಿಯದೆ ಕುಂತಿಯ ಪುತ್ರರು ಬಂದಿರಲು
ಹಸ್ತಿನಪುರದಲಿ ಕೌರವರಿಂದಲಿ ರಾಜಾತಿಥ್ಯವು ದೊರೆತಿರಲು
ಊರಿನ ಜನಗಳು ಅಚ್ಚರಿಗೊಂಡರು ಪಾಂಡುಕುಮಾರರ ಬರವಿನಲಿ
ವೈರಿಯ ಮನೆಯಲಿ ಔತಣವೆಂದರೆ ಅಚ್ಚರಿಯಲ್ಲವೆ ಲೋಕದಲಿ?
ಆದರೆ, ಅರಮನೆ ಆಡಳಿತದಲ್ಲಿ ತಲೆಯನು ತೂರಿಸಲಾಗುವುದೆ?
ಅರಮನೆಯೊಳಗಡೆ ನಡೆಯುವ ಶಕುನಿಯ ಸಂಚನು ಭೇದಿಸಲಾಗುವುದೆ?
ಕೌರವರೇನೋ ಸಂಚನು ಹೂಡುತ ಪಾಂಡವರನು ಕರೆಸಿಹರೆಂದು
ನಾಡಿನ ಜನಗಳು ಆಡುತಲಿದ್ದರು ತೋಚಿದಂತೆ ತಲೆಗೊಂದೊಂದು!
ಅರಮನೆಯಲಿ ಜೂಜಾಡುವ ವಿಷಯವು ಹಬ್ಬಿತು ಎಲ್ಲೆಡೆ ಬೇಗದಲಿ
ಅರಸರಿಗಿದು ಸಾಮಾನ್ಯವು ಎನ್ನುತ ಸ್ವೀಕರಿಸಿದರು ವಿನೋದದಲಿ
ನೆರೆಹೊರೆ ರಾಜ್ಯದ ರಾಜರು ಬಂದರು ತುಂಬಿ ಕುತೂಹಲ ಮನದಲ್ಲಿ
ಪುರಜನ ಪರಿಜನ ಬಂಧುಬಾಂಧವರು ಎಲ್ಲರೂ ನೆರೆಯ ಸಭೆಯಲ್ಲಿ
ಕೌರವರಾಯನ ಕೋರಿಕೆ ಮೇರೆಗೆ ಜೂಜಿನ ಆಟ ವಿನೋದದಲಿ
ಕೌರವ ಪಾಂಡವರಿಬ್ಬರ ನಡುವಲಿ ನಡೆಯಿತು ಎಲ್ಲರ ಎದುರಿನಲಿ!
ಧೃತರಾಷ್ಟ್ರನ ಸುತ ದುರ್ಯೋಧನನು ಮೊದಲಿಗೆ ಆಟವು ಒಲ್ಲೆಂದ
ಮೋಜಿನ ಜೂಜಿನ ಆಟವನಾಡಲು ತನಗದು ಗೊತ್ತೇ ಇಲ್ಲೆಂದ
“ಜೂಜನು ಆಡುವುದಾದರೆ ನಾನೋ ನೋಡುವ ಕೆಲಸವ ಮಾಡುವೆನು
ನನ್ನಯ ಬದಲಿಗೆ ಶಕುನಿಯು ಆಡಲು ಸಮ್ಮತಿಯನ್ನು ನೀಡುವೆನು”
ಎನ್ನುತ ಸಭೆಯಲಿ ಮುಗ್ಧನ ತೆರದಲಿ ಎಲ್ಲರ ಮೆಚ್ಚುಗೆ ಗಳಿಸಿದನು
ಧರ್ಮಜನೊಂದಿಗೆ ಸೆಣಸಲು ಶಕುನಿಯನಾಟವನಾಡಲು ಇಳಿಸಿದನು
ಭೀಷ್ಮ, ದ್ರೋಣ, ಎದುರಾದಿಗಳೆಲ್ಲರು ಒಪ್ಪಿಗೆಯಿತ್ತರು ಆಟಕ್ಕೆ
ಧರ್ಮನು ತಾನೂ ಒಪ್ಪಿಗೆಯಿತ್ತನು ಶಕುನಿಯ ಸಂಗಡ ಪಂದ್ಯಕ್ಕೆ
ಮೊದಲೆರಡಾಟವು ಧರ್ಮಜ ಗೆಲ್ಲಲು ಕೇಕೆಯ ಹಾಕಿತು ಜನವೆಲ್ಲ
ಮೂರನೆ ಆಟವ ಶಕುನಿಯು ಗೆಲ್ಲಲು ಸುಮ್ಮನೆ ಕುಳಿತರು ಅವರೆಲ್ಲ

ನೆರೆದ ಮಂದಿ ಕಂಡುಂಡರು ಆ ದಿನ ಆಟದಲ್ಲಿ ಆನಂದವನು
ಬಿರಿದ ನಗುವಿನಲಿ ಮನ ಗರಿಗೆದರಿತು ಹೊಂದುತ ಮಹದಾನಂದವನು
ಸರಿದ ಸಮಯವೇ ಅರಿಯದೆ ಹೋಯಿತು ಮನವು ತಲ್ಲೀನವಾಗಿತ್ತು
ಬೆರಗಿನಲ್ಲಿಯೇ ಮುಳುಗುತ ತೇಲುತ ಆನಂದವ ಅನುಭವಿಸಿತ್ತು

ಶಕುನಿಯು ನುಡಿದನು- “ಸುಮ್ಮನೆ ಆಟವ ಆಡಿದರದರಲಿ ಮೋಜಿಲ್ಲ
ಪಣವನು ಒಡ್ಡುತ ಆಡುತಲಿದ್ದರೆ ಕಳೆಯೇರದೆ ಇರುವುದೇ ಇಲ್ಲ”
ಒಡನೆ ಸುಯೋಧನ ನುಡಿದನು “ಪಂದ್ಯಕೆ ಮಡಗುವೆ ಚಿನ್ನದ ಕಡಗವನು
ಶಕುನಿಯ ಪರ ನಾನಿಡುವೆನು ಒಡವೆಯ, ಧರ್ಮಜ ತಾನೇನಿರಿಸುವನು”
ಎನ್ನುತ ಚಿನ್ನದ ಕಡಗವ ತೆಗೆಯುತ ಎಲ್ಲರ ಎದುರಿಗೆ ಅದನಿಡಲು
ಧರ್ಮನು ತಾನೂ ತೋಳಲಿ ಧರಿಸಿದ ಚಿನ್ನದ ಕಡಗವ ತೆಗೆದಿಡಲು
ಜೂಜಿನ ಆಟಕೆ ರಂಗೇರಿದ್ದಿತು ಎಲ್ಲರ ಕಣ್ಣೂ ಅರಳಿತ್ತು
ಚಿನ್ನದ ಕಡಗವ ಧರ್ಮಜ ಗೆಲ್ಲಲು ಹರ್ಷೋದ್ಗಾರವು ಮೊಳಗಿತ್ತು
ಮುಂದಿನ ಪಂದ್ಯಕೆ ಸಾವಿರ ಹೊನ್ನು ಮತ್ತೊಂದಕೆ ಕಂಠೀಹಾರ
ಪಂದ್ಯ ಪಂದ್ಯದಲಿ ಧರ್ಮಜ ಗೆಲ್ಲಲು ಎದ್ದಿತು ಎಲ್ಲೆಡೆ ಜೈಕಾರ!
ಪಂದ್ಯದ ಪಣವದು ಏರುತ ಸಾಗಿತು ಈ ಸಲ ರಾಜ್ಯದ ಭಂಡಾರ
ಧರ್ಮಜನೂ ಸೈ ಎನ್ನುತ ಒಡ್ಡಿದ ಇಂದ್ರಪ್ರಸ್ಥದ ಬಂಗಾರ
ನೋಡುವ ಸಭಿಕರೂ ಜೂಜಿಗೆ ಇಳಿದರು ಪಾಂಡವರಿಗೆ ಇದು ಜಯವೆಂದು
ಕೌರವರಿಗೆ ಜಯವೆನ್ನುತ ಕೆಲವರು ಸ್ಪರ್ಧೆಗೆ ಇಳಿದರು ಮುಂಬಂದು
ಅಲ್ಲಿಂದಾಚೆಗೆ ತೋರಿಸತೊಡಗಿದ ಶಕುನಿಯು ತನ್ನಯ ಕೈಚಳಕ
ಆಡಿದ ಆಟಗಳೆಲ್ಲವ ಗೆಲ್ಲಲು ಪಾಂಡವ ಪಾಳೆಯದಲ್ಲಿ ನಡುಕ!

ಧರ್ಮರಾಯನಿಗೆ ಮೈಬಿಸಿಯಾಯಿತು ಏರಿತು ಜೂಜಿನ ಜ್ವರವಲ್ಲಿ
ಕೈ ಕೈ ಹಿಚುಕುತ ಪಂದ್ಯವನೊಡ್ಡುತಲಿದ್ದನು ಮೈಮನ ಮರೆವಿನಲಿ
ಆಟವು ವಿಷಮಕೆ ಹೋಗುವುದೆನ್ನುತ ಅರಿತರು ಹಿರಿಯರು ಆಗಲ್ಲಿ
ವಿದುರನು ‘ಆಟವ ನಿಲ್ಲಿಸಿ’ ಎನ್ನುತ ತಡೆಯಲು ಬಂದ ವಿವೇಕದಲಿ
ಆಟದ ಅಮಲಲಿ ‘ನಿಲ್ಲಿಸಕೂಡದು’ ಎಂದರು ಎರಡೂ ಕಡೆಯವರು
ಸೋತವರಿಗೆ ಗೆದ್ದೇಗೆಲ್ಲುವ ಛಲ ಗೆದ್ದವರಿಗೆ ಇನ್ನೂ ಜೋರು!

ಹಿರಿಯರು ಹೇಳುವ ಹಿತನುಡಿ ಮನಸಿಗೆ ರುಚಿಸದೆ ಹೋದವು ಇಬ್ಬರಿಗೂ
ಜೂಜಿನ ನಶೆಯದು ತಲೆಗೇರುತ್ತಿರೆ ಗೆಲ್ಲುವ ಛಲ ಪ್ರತಿಯೊಬ್ಬರಿಗೂ
ಶಕುನಿಯ ಆಟವ ಮೆಚ್ಚಿದ ಕೌರವ ಪಂದ್ಯಕೆ ಒಡ್ಡಿದ ಕುರುರಾಜ್ಯ
ಧರ್ಮಜನೂ ಹಿಂಜರಿಯದೆ ಒಡ್ಡಿದ ಇಂದ್ರಪ್ರಸ್ಥದ ಸಾಮ್ರಾಜ್ಯ!
ಪಂದ್ಯವ ಶಕುನಿಯು ಗೆದ್ದನು ಕೂಡಲೆ ಇಂದ್ರಪ್ರಸ್ಥವು ಬಲಿಯಾಯ್ತು
ಕೌರವ ಕೇಕೆಯು ಮುಗಿಲನು ಮುಟ್ಟಿತು ಪಾಂಡವರದು ಬರಿಗೈಯಾಯ್ತು!!

ಜೂಜು ಮೋಜಿನಲಿ ಮೊದಮೊದಲಲ್ಲಿ ಎಲ್ಲವೂ ಬಲುಸೊಗಸೆನಿಸುವುದು
ಮೋಜು ಮಸ್ತಿಗಳು ಮದವೇರಿಸುತಿರೆ ಹಸನಾಗಿದೆ ಮನವೆನಿಸುವುದು
ಜೂಜಿನಲ್ಲಿ ಆಕರ್ಷಣೆ ಹೆಚ್ಚುತ ಮನಸಿಗೆ ಹುಚ್ಚನು ಹಿಡಿಸುವುದು
ಮೋಜಿನಲ್ಲಿ ಮನ ಮುಳುಗಿತು ಎಂದರೆ ಮನಸಿನ ಗತಿಯನ್ನು ಕೆಡಿಸುವುದು

ಆದರೆ, ಎದೆಗುಂದದ ಧರ್ಮಜನು ಒಡ್ಡಿದ ತಮ್ಮಂದಿರನೆಲ್ಲ
ಆಗಲೂ ಸೋಲು ಅವನಿಗೆ ಉಳಿಯಿತು ಪ್ರತ್ಯುತ್ತರ ಅವನಲ್ಲಿಲ್ಲ
ಕಡೆಗೆ ಧರ್ಮಜನು ತನ್ನನ್ನೇ ಪಣ ಎಂದನು ಹತಾಶ ಭಾವದಲಿ
ಶಕುನಿಯು ಧರ್ಮಜನನ್ನೂ ಗೆದ್ದನು ಮುಂದಿನ ಒಂದೇ ಆಟದಲಿ!
ಮುಂದಿನ ಪಂದ್ಯಕೆ ಒಡ್ಡಲು ತನ್ನಲಿ ಏನೂ ಇಲ್ಲೆಂದನು ಧರ್ಮ
‘ದ್ರೌಪದಿ ಇರುವಳು’ ಎನ್ನಲು ಶಕುನಿಯು ಅರಿಯದೆ ಹೋದನು ಒಳಮರ್ಮ
ಗೆದ್ದುದನೆಲ್ಲವ ಒಂದೇ ಪಂದ್ಯಕೆ ಒಡ್ಡಿಬಿಟ್ಟ ಕೌರವರಾಯ
ದೂರದಾಸೆಯಲಿ ಪಂದ್ಯಕೆ ಪತ್ನಿಯ ಒಡ್ಡಿಬಿಟ್ಟ ಪಾಂಡವರಾಯ
ಎಲ್ಲೆಡೆ ಮೌನವು ಮಡುಗಟ್ಟಿದ್ದಿತು ಮುಂದೇನೋ ದೇವರೆ! ಎಂದು
ಶಕುನಿಯ ಕೃತ್ರಿಮ ನಡೆಯೇ ಗೆಲ್ಲಲು ಧರ್ಮನು ತಲೆತಗ್ಗಿದನಂದು!
ದುರ್ಯೋಧನ ಬಲು ಸಂತಸದಿಂದಲಿ ಶಕುನಿಯ ಭುಜವನು ತಟ್ಟಿದನು
ಕೊಟ್ಟ ಮಾತನ್ನು ಉಳಿಸಿಕೊಂಡನೆಂದೆನ್ನುತ ಶಕುನಿಯು ಬೀಗಿದನು
ಕೌರವ ಪಾಳೆಯ ಕೇಕೆಯ ಹಾಕುತ ಕುಣಿಯಿತು ತಕಥೈ ಸಭೆಯಲ್ಲಿ
ಹಿರಿಯರೆಲ್ಲ ತಲೆತಗ್ಗಿಸಿ ಕುಳಿತರು ಧರ್ಮವೆಲ್ಲಿ ಉಳಿದಿದೆ ಇಲ್ಲಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...