ಕನಸಿಗನ ಕನವರಿಕೆ ಕವನ ಅಲ್ಲಲ್ಲಿ
ವಾಕ್ಯ ಮುರಿದ ವ್ಯಾಕರಣ ತನಗೆ ತಾನೇ
ಬದ್ಧ ಉಳಿದಂತೆ ಎಲ್ಲವೂ ಅಸಂಬದ್ಧ
ಕಾರ್ಯವ ಹುಡುಕುವುದು ಕಾರಣ
ಮಧ್ಯರಾತ್ರಿ ಮಲಗಿದ ಧರಿತ್ರಿ ವಿಸ್ಮಯ
ತುಂಬಿದ ಜನನಿಬಿಡ ಸಂಜ್ಞೆ ಬಿಂಬಿಸುವ
ಹಾಗೆ ದಿಂಬಿನ ಮೇಲೆ ಬಿಂಬ ಮಗ್ಗುಲು
ಬದಲಿಸಿದ ಉದ್ಧತ ಪ್ರಜ್ಞೆ
ಕದವಿಕ್ಕಿ ಬೀಗದ ಕೈ ಬಿಸಾಕಿದ ಪದಗಳ
ನಡುವೆ ಅಂತರ ಬಹಳ ದಾಟಿದವನೂ
ನಾನೆ ಕುಸಿದವನೂ ನಾನೆ
ದಿಡ್ಡಿ ಬಾಗಿಲ ಹತ್ತಿರ
ಆಲಸಿಗ ಕೈಗೊಂಡ ಸುದೀರ್ಘ
ಯಾನ ಯಾವುದೇ ಪೂರ್ವಸಿದ್ಧತೆ ವಿನಾ
ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಲ್ಲಿ
ರುವೆನೆಂಬುದನೆ ಮರೆತವನ
ಕೆಲವರು ನದಿ ದಾಟಿ ಹೋದರು
ಕೆಲವರು ಸೂರ್ಯಾಸ್ತ ನೋಡುತ್ತ
ನಿಂತರು ಕೆಲವರು ಗ್ರಾಮಾಂತರಗಳಲ್ಲಿ
ಕರಗಿದರು ಕೆಲವರು ಎದ್ದು ಹೋದರೂ
ಇದ್ದಲ್ಲಿ ಇದ್ದರು ಎಲ್ಲ ವೈರುಧ್ಯಗಳೂ
ಸರಿಗಮ ಒಂದೇ ಸಾಲಿನಲ್ಲಿ ಬೆಂಕಿ ಮತ್ತು
ಹಿಮ ಕಾಡಿನಲ್ಲಿ ವ್ಯಾಘ್ರ ಬಯಲಲ್ಲಿ ದನ
ಮಧ್ಯಾಹ್ನ ಟಾರಿನ ಪರಿಮಳ ಸಂಜೆ ಮಲ್ಲಿಗೆಯ
ಘಮಘಮ ಇರುಳೆಲ್ಲಾ ಎಚ್ಚರವಿದ್ದ
ಗೂಬೆ ಹಗಲು ತೂಗುವುದು ನಿದ್ದೆ
ಮಳೆಗೆ ಕಾಯುವ ಅಣಬೆಯ ಅತಿಸೂಕ್ಷ್ಮ ಬಿತ್ತು
ಬೇಸಿಗೆಯೆಲ್ಲಾ ಬಣಬೆಯೊಳಗಿತ್ತು
ಮನೆಯನೊಂದ ಕಟ್ಟಿಸಲೇನು ಮೋಡದ
ಕೆಳಗೆ ಮಳೆನೀರು ಯಾವ ಲೆಕ್ಕ ಬೇಸಿಗೆಯ
ಸೆಕೆ ಯಾವ ಲೆಕ್ಕ ಮೋಡವದರ ನಾಡಿಗೆ
ಮನೆ ಅದರ ಪಾಡಿಗೆ-ಎನ್ನುವುದೊಂದು
ಹಳೇ ಪದ್ಯ
*****

















