ಉಧೋ ಮನಸೆ ಉಧೋ
ಉಧೋ ಉಧೋ ಮನಸೇ
ಬ್ರಹ್ಮಾಂಡದ ಕನಸೇ
ವಿಶ್ವಾತ್ಮನ ನೆನಸೇ
ಜನ್ಮಾಂತರ ಜೀವವೇ
ಅಂತರತಮ ಭಾವವೇ
ಓ ಮನಸೇ
ಉಧೋ ಉಧೋ ಮನಸೇ
ಸಿದ್ಧವಾಗಿರು ನೀನೆಲ್ಲ
ಸಾಧ್ಯತೆಗು
ಬದ್ಧವಾಗಿರು ನೀನೆಲ್ಲ
ಬಾಧ್ಯತೆಗು
ಸದಾ ಜಾಗೃತವಾಗಿರು ಮನಸೇ
ಸದಾ ಕರ್‍ತೃವಾಗಿರು ಕವಿಯಾಗಿರು ಮನಸೇ
ಓ ಮನಸೇ
ಉಧೋ ಉಧೋ ಮನಸೇ
ಧ್ವನಿಯೊಂದು ಮನಸೇ
ಪದ ಪದಾರ್‍ಥ ಮನಸೇ
ವಾಕ್ಯ ವ್ಯಾಕರಣ ಮನಸೇ
ಜ್ಞಾನವಿಜ್ಞಾನ ಮನಸೇ
ಮಹಾ ಕಲ್ಪನಾವಿಲಾಸ ಮನಸೇ
ಓ ಮನಸೇ
ಉಧೋ ಉಧೋ ಮನಸೇ
ಕೃತಿ ಸಂಸ್ಕೃತಿ
ಕತೆ ನಾಗರಿಕತೆ
ಅಕ್ಷಯ ಅಕ್ಷರಗಳ
ಅಗಣಿತ ನಕ್ಷತ್ರಗಳ ಮನಸೇ
ಓ ಮನಸೇ
ಉಧೋ ಉಧೋ ಮನಸೇ
ಅತಿ ಮಾನಸ ಮನಸೇ
ಇತಿ ಮಾನಸ ಮನಸೇ
ಏನು ನೀನು ಏನು ನಾನು
ಓ ಮನಸೇ
ಉಧೋ ಉಧೋ ಮನಸೆ
ನೀನಿರುವುದೆ ಸರೋವರ
ನೀನಿರುವುದೆ ಅಚ್ಛೋದ
ನೀನಿರುವುದೆ ಕಳಹಂಸ
ನೀನಿರುವುದೆ ಅಲ್ಲೋಲ
ನೀನಿರುವುದೆ ಶಾಂತಿ
ಓ ಮನಸೇ
ಉಧೋ ಉಧೋ ಮನಸೇ
ಓ ಶಾಂತಿಃ ಶಾಂತಿಃ ಶಾಂತಿಃ
*****


















