ನೀವೆ ಟ್ರೇ. ಕಾ. ಏನು? ಅಲ್ಲಗಳೆಯುವಿರೇಕೆ?
ಆ ಹೆಡಿಗೆ ಪಾವುಡವೆ ಹೇಳುವದು. ಅದು ಕುರ್‍ಚೆ-
ಇತ್ತ ಬನ್ನಿರಿ ಹಸೆಯ ಮೇಲಿಂತು. ಊಂ? ಚರ್‍ಚೆ?
ಆಧುನಿಕ ಕವಿತೆಯನು ಕುರಿತೊ? ಮೋರೆಯ ಮೇಕೆ-
ಕಳೆಯ ಕಳೆಯಿರಿ ಮೊದಲು! ಸಾಲೆ ಹುಡುಗರ ಕೇಕೆ-
ಯೆನ್ನುವಿರ ಈ ಕವಿತೆ? ಇಲ್ಲಿ ನೋಡಿರಿ, ಬರ್‍ಚೆ!
ಹೃದಯದಲಿ ನಾಟುವದೊ? ಅಂತೆ ಕವಿತೆಯು. ಮೂರ್‍ಛೆ
ಹೋಗುವಿರ ಪ್ರಾಸರಹಿತವು ಎಂದು? ಅದು ಏಕೆ?

ಹೆಂ.ಟ್ರೇ.ಕಾ, ಗಂ.ಟ್ರೇ.ಕಾ. ಯಾವ ಟ್ರೇ.ಕಾ. ನೀವು?
ಷಟ್ಪದಿ, ಷಡಕ್ಷರಿಯು ಬೇಕೆ? ಆ ಷಟ್ಕಾಸ್ತ್ರ-
ದಾವರಣ ಬೇಕೆ ಕವಿತೆಗೆ? ನಿಮಗೆ ಬ್ರಹ್ಮಾಸ್ತ್ರ
ಬೇಕಿಹುದು. ಇಂತೇಕೆ? ಭೋಂಕನೆದ್ದಿರಿ ಬಿಟ್ಟು
ಚರ್ಚೆಯನು? ಮೌನದಲಿ ಬುಸುಗುಡುತಿಹುದು ಸಿಟ್ಟು!
ಇಲ್ಲಿದೋ! ನಾನು ವರಿಬಿಟ್ಟ ನಾಗರಹಾವು!
*****