ನೋಡದಿರೆಲೋ! ಪಾಪಿ! ಕಣ್ಣೆತ್ತಿ, ಸಾಗುತಿಹ
ಅಂಗನೆಯ. ಅಂಗಾಂಗವಿರಲು ಅಸ್ತವ್ಯಸ್ತ,-
ಇವಳಲ್ಲ ನೃತ್ಯಾಂಗನೆಯ ಗೆಳತಿ. ತಾ ಮಸ್ತ-
ಕದಿ ಹೊತ್ತ ಉದಕಪಾತ್ರೆಯ ಭಾರ, ಬಗಲಲಿಹ
ಬಿಂದಿಗೆಯಲಂಕಾರದಿಂದ ಬಳಕುವ ದೇಹ-
ವವಳದದು. ಇತ್ತಿಲ್ಲ ನಿನಗೌತಣವ ವಸ್ತ್ರ-
ಒಡವೆಗಳ ಧರಿಸುತ್ತ, ಮೀನಾಕ್ಷಿಯಿರೆ, ಬೆಸ್ತ-
ರವನು ನೀನೆಂದೆನ್ನದಿರು. ಸಲ್ಲದಿದು ಮೋಹ.
ಅಲ್ಲಿವಳು ಬಿಡಿಹೆಣ್ಣು. ತುಂಬಿರುವ ಕೊಡಹೊತ್ತ
ಕುಲವಧುವು ಕಾಣಿವಳು! ಒಂದು ಸಂಸಾರಕಿಹ
ಹಂಸಗಮನೆಯು, ಒಂದು ಮನೆಯ ನಂದಾದೀಪ!
ನೀ ಕಂಡಿಹುದೆ ಸೂಳೆ, ನೀನಾಡಿಹುದೆ ಲೆತ್ತ.
ಈ ಭಾಷೆ ನಿನಗರಿದು. ಇರಲೇನು? ನೀನರುಹ-
ಬೇಕಿದನು ನಿನ್ನಂಥ ಮೊದ್ದರೋಳಿಗೆ, ಭೂಪ!
*****