ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉಕ್ಕಿ ಒಮ್ಮೊಮ್ಮೆ ನರ್ತನವನ್ನು ಮಾಡಿ ಬಂಡೆಯ ಮನವೊಲಿಸಲು ತೊಡಗುತ್ತಿತ್ತು. ಇದನ್ನು ಗಮನಿಸಿದ ಕಲ್ಲು ಬಂಡೆಗೆ ಏನೂ ಅರ್ಥವಾಗಲಿಲ್ಲ. ಬರಡು ಬಂಡೆಯಲ್ಲಿ ಭಾವ ಸ್ಪಂದನವಿರಲಿಲ್ಲ. ಅದರ ಹೃದಯ ಹೆಪ್ಪುಗಟ್ಟಿ ಬಿಟ್ಟಿತ್ತು. ಆರ್ದ್ರತೆ ಎಂಬುದು ಬಂಡೆಗೆ ಗೊತ್ತಿರಲಿಲ್ಲ. ಹುಲ್ಲಿನ ಮೃದುಲತೆ ಕೂಡ ಎಂದೂ ಅನುಭವಿಸಿರಲಿಲ್ಲ. ಕಲ್ಲು ಬಂಡೆ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಘನೀಭೂತವಾಗಿ ಕೂತಿತ್ತು. ಆದರೆ ಹುಲ್ಲಿಗೆ ಮಾತ್ರ ಬಂಡೆಯ ಮೇಲಿನ ಪ್ರೀತಿ ಹೋಗಲಿಲ್ಲ. ಆಗಾಗ ಗಾಳಿಯಲ್ಲಿ ವಾಲಿ ಬಂಡೆಯನ್ನು ಅಪ್ಪಿ ಮುದ್ದಿಸುತ್ತಿತ್ತು. ತನ್ನ ಎದೆಯ ಮೇಲೆ ಇಬ್ಬನಿ ಬಿದ್ದಾಗ ಅದನ್ನು ಬಂಡೆಯ ಎದೆಯ ಮೇಲಿಟ್ಟು ತನ್ನ ಪ್ರೇಮದ ಕಾಣಿಕೆ ಕೊಡುತ್ತಿತ್ತು.
ಹುಲ್ಲಿನ ಈ ಪ್ರೇಮಾರಾಧನೆ ಬಂಡೆಗೆ ಏನೂ ಅರ್ಥವಾಗಲಿಲ್ಲ. ಇದೇನು ಈ ಹುಲ್ಲಿನ ವಿಚಿತ್ರ ವರ್ತನೆ ಎಂದು ಯೋಚಿಸಿ ಒಂದು ದಿನ ತುಟಿ ತೆರೆದು ಮಾತನಾಡಲಾರಂಭಿಸಿತು.
“ಎಲೆ ಹುಲ್ಲೆ! ನೀನು ಏಕೆ ನನ್ನ ಬಳಿಯೇ ಜೀವಿಸುತ್ತಿರುವೆ?”ಎಂದಿತು.
“ನನಗೆ ನಿನ್ನ ಕಂಡರೆ ಬಲು ಪ್ರೀತಿ”ಎಂದಿತು ಹುಲ್ಲು.
“ಪ್ರೀತಿ” ಹಾಗಂದರೆ ಏನು?” ಎಂದಿತು ಕಲ್ಲು.
“ಬೀಡು ಬಿಟ್ಟಿರುವ ನನ್ನ ಬೇರಿನ ಜೀವರಸವಾದ ಹಸಿರೇ ಪ್ರೀತಿ”
“ಅದು ಸರಿ, ನನ್ನನೇಕೆ ನೆಚ್ಚಿಕೊಂಡಿರುವೆ?” ಎಂದಿತು ಕಲ್ಲು.
“ಕಮಾನಿನಂತೆ ಬಾಗುವ ನನ್ನ ಹೃದಯ ಭಾವಗಳಿಗೆ ನೀನು ಆಧಾರ, ಆಶ್ರಯವಾಗಿರುವೆ. ಅದಕ್ಕೆ ನಿನ್ನ ಕಂಡರೆ ನನಗೆ ಬಲು ಪ್ರೀತಿ” ಎಂದಿತು.
“ನಾನು ಕಲ್ಲು ಬಂಡೆ, ಬಲು ಒರಟು, ಗಟ್ಟಿ, ನೀನು ಹುಲ್ಲು ನವಿರು, ಮತ್ತು ಮೃದು. ನಮ್ಮಿಬ್ಬರ ಸಮಾಗಮ ಸಾಧ್ಯವಿಲ್ಲ.” “ನನ್ನಿಂದ ನಿನ್ನ ಸಾವು ಕೂಡ ಸಾಧ್ಯ. ಆದ್ದರಿಂದ ನನ್ನಿಂದ ನೀನು ದೂರ ಹೋಗಿ ಬಿಡು” ಎಂದಿತು ಕಲ್ಲು ಬಂಡೆ.
“ಹಾಗೆ ಹೇಳಬೇಡ ಪ್ರಿಯಕರ ಕಲ್ಲು ಬಂಡೆ! ನಮ್ಮಲ್ಲಿ ಸಹ ಜೀವನ ಸಾಧ್ಯ. ನನ್ನ ಮೃದುಲತೆಗೆ ನಿನ್ನ ಕಠಿಣತೆಯ ಮೋಹವಿದೆ. ನಿನ್ನ ಕಠಿಣತೆಗೆ ನನ್ನ ಮೃದುಲತೆಯ ಆಶೆ ಇದೆ. ನಿನ್ನ ಪಾದದ ಅಡಿದಾವರೆಯಲಿ ನನ್ನ ಬೆಳೆಯಲು ಬಿಡು, ನಾವು ಜೋಡಿಯಾಗಿ ಇರೋಣ, ಬಾಳೋಣ, ಕಲ್ಲು-ಹುಲ್ಲಿನ ಬಾಳು ವಿಶ್ವ ಕನ್ನಡಿಯಲಿ ಸಮರಸದ ಬಿಂಬವಾಗಲಿ” ಎಂದಿತು.
ಕಲ್ಲು ಬಂಡೆಗೆ ಹೃದಯ ಕರಗಿತು. ಪ್ರೀತಿ ಅಂಕುರಿಸಿತು.
*****


















