Home / ಕವನ / ಅನುವಾದ / ಬೈಜಾಂಟಿಯಮ್

ಬೈಜಾಂಟಿಯಮ್

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು;
ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು;
ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು
ದೊಡ್ಡ ಚರ್‍ಚಿನ ಗಂಟೆ ಬಡಿದು, ಗಾಳಿಯಲೀಗ
ರಾತ್ರಿಂಚರರ ಹಾಡು. ಚಿಕ್ಕಯೋ ಚಂದ್ರನೋ
ಹಚ್ಚಿಟ್ಟ ಧವಳಗುಮ್ಮಟ ತಿರಸ್ಕರಿಸುತಿದೆ ಮರ್‍ತ್ಯನ ಸಮಸ್ತವನ್ನೂ,
ಮರ್‍ತ್ಯ ಬಾಳಿನ ಎಲ್ಲ ಸಂಕೀರ್‍ಣತೆಗಳನ್ನು
ಮರ್‍ತ್ಯಧಮನಿಗಳ ರೊಚ್ಚೆ ರೋಷಗಳನ್ನು

ತುಯ್ಯುತಿದೆ ಕಣ್ಣ ಮುಂದೊಂದು ಪ್ರತಿಮೆ, ಮನುಷ್ಯನೋ ನೆರಳೋ,
ನೆರಳೆನ್ನುವುದೆ ಸರಿ, ನೆರಳಿಗಿಂತಲು ಪ್ರತಿಮೆ ಎಂದರಿನ್ನೂ ಸರಿ;
ಮಮ್ಮಿವಸ್ತ್ರದಲಿ ಹುಗಿದಿಟ್ಟ ಅಧೋಲೋಕದ ಆತ್ಮ
ಸುತ್ತಬೇಕಾದ ಪಥವ ಬಿಚ್ಚಬಹುದು;
ಉಸಿರಿರದ ತೇವವಿಲ್ಲದ ಬಾಯಿಯೊಂದು
ಉಸಿರು ಬಿಗಿಹಿಡಿದ ಬಾಯಿಗಳ ತನ್ನಲ್ಲಿಗೆ ಕರೆಸಬಹುದು;
ಅತಿಮಾನುಷಕ್ಕೆ ಉಘೇ ಎನ್ನುವವ ನಾನು;
ಬಾಳಿನಲ್ಲಿನ ಸಾವು, ಸಾವಿನಲ್ಲಿನ ಬಾಳು ಎನ್ನುವೆ ಅದನ್ನು

ಇದು ಪವಾಡವೆ, ಹಕ್ಕಿಯೆ, ಹೊನ್ನಿನಲಿ ಕೊರೆದ ಕುಶಲ ಕೈಕಸುಬೆ?
ಹಕ್ಕಿಗಿಂತ, ಹಸ್ತಕೌಶಲಕ್ಕಿಂತ ಇದು ದಿಟ ಪವಾಡವೆ,
ನಕ್ಷತ್ರದೀಪ್ತ ಚಿನ್ನದ ಕೊಂಬೆಮೇಲೆ ಇದು ನೆಟ್ಟು ನಿಲಿಸಿದ್ದು
ಅಧೋಲೋಕದ ಹುಂಜಗಳ ಹಾಗೆ ಕೊರಳೆತ್ತಿ ಕೂಗಬಲ್ಲದ್ದು.
ಚಂದ್ರಕಾಂತಿಯ ತಿವಿತಕುದ್ದೀಪ್ತವಾಗಿ ಇದು ಮೂದಲಿಸೀತು ಕೂಗಿ
ನಿಜದ ಹಕ್ಕಿಗಳನ್ನು ಹೂವಿನೆಸಳುಗಳನ್ನು
ರಕ್ತದ್ದೊ ರೊಚ್ಚೆಯದೊ ಎಲ್ಲ ಗೋಜಲುಗಳನ್ನು
ಪರಿವರ್‍ತನೆಯೆ ಇರದ ಲೋಹವೈಭವದಲ್ಲಿ ಬೀಗಿ.

ಚಕ್ರವರ್‍ತಿಯ ಮಹಲ ನೃತ್ಯದಂಗಣದಲ್ಲಿ
ಅರಣಿ ಉದ್ದೀಪಿಸದ, ಉಕ್ಕು ಉರಿಹೊತ್ತಿಸದ, ಬಿರುಗಾಳಿ ಬಾಧಿಸದ,
ಜ್ವಾಲೆಯಿಂದಲೆ ಎದ್ದ ಜ್ವಾಲೆ ಜಿಗಿದಾಡುವುವು,
ಅಲ್ಲಿ ಬರುವುವು ರಕ್ತಸಂಜನಿತ ಜೀವಗಳು,
ಕೆರಳು ಮೊಳೆಸಿದ ತೊಡಕುಗಳನ್ನೆಲ್ಲ ನೀಗುವುವು,
ಲಯವಾಗಿ ನೃತ್ಯದಲಿ
ಸಮಾಧಿಯ ಮಧುರ ನೋವಿನಲಿ
ವಸ್ತ್ರದಂಚನ್ನು ಸಹ ಸುಡಲಾರದಂಥ ಜ್ವಾಲೆಯ ವೇದನೆಯಲ್ಲಿ

ಕೆಸರು ನೆತ್ತರ ಮಧ್ಯೆ ಡಾಲ್ಫಿನಿನ ಬೆನ್ನೇರಿ ಜೀವಗಳ ಸಾಲು,
ಸಾಲುಜೀವದ ಧಾರೆಯನ್ನು ಅಲ್ಲಲ್ಲೇ ಛೇದಿಸುವ ಕುಲುಮೆಗಳು,
ಚಕ್ರವರ್‍ತಿಯ ಗೃಹದ ಹೊನ್ನ ಕುಲುಮೆಗಳು!
ಒಡೆಯುತಿವೆ ಕೆರಳು ಮೂಡಿಸಿದ ಗೋಜಲುಗಳನ್ನು
ನೃತ್ಯದಂಗಣದ ಅಮೃತಶಿಲೆಯ ಹಾಸುಗಳು;
ಆ ಪ್ರತಿಮೆಗಳು ಅವುಗಳಿಂದ ಒಡಮೂಡುವ
ಬೇರೆ ಹೊಸ ಪ್ರತಿಮೆಗಳು,
ಆ ಡಾಲ್ಫಿನನ್ನು ಸೀಳಿರುವ, ಆ ಗಂಟೆದನಿ ಪೀಡಿಸುವ ಕಡಲುಗಳು.
*****
(೩೩) ಡಾಲ್ಫಿನ್ನಿನ ಬೆನ್ನೇರಿ: ಸತ್ತವರ ಜೀವಗಳು ಡಾಲ್ಫಿನ್ನಿನ ಬೆನ್ನು ಹತ್ತಿ ಪರಲೋಕಕ್ಕೆ ಬರುತ್ತವೆ ಎಂಬ ನಂಬಿಕೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...