ಬುದ್ಧ ನೀ ಎದ್ದಾಗ
ಜಗವೆಲ್ಲ ಮಲಗಿತ್ತು
ಶಾಂತಚಿತ್ತದಿ ನಡೆದೆ
ಧೀರ ನಡಿಗೆಯಲಿ
ಕಾಮಕ್ರೋಧ ಮೋಹಗಳ ಧಿಕ್ಕರಿಸುತ

ಮಹಾ ಮಾನವ ನೀನಾಗುತ
ಕತ್ತಲಲಿ ನೀ ನಡೆದರೂ
ಪ್ರಕಾಶ ಚೆಲ್ಲುತ ಕತ್ತಲು ಓಡಿಸಿದಿ

ಅಂದು ಜಗದಳಲು ತಣಿಸಲು
ಕನವರಿಸುತ ಕಾಯುತ್ತಿತ್ತು ಜಗವು
ನಿನ್ನ ಬರುವಿಗಾಗಿ…

ವರ್ಣ ಪದ್ಧತಿಯ ಭಾರಕ್ಕೆ
ಬಳಲಿ ಬೆಂಡಾಗಿದ್ದ ಸಮಾಜ
ನಿನ್ನ ಸಮತೆ ಸರಳತೆಗೆ ಬಾಯಿ ತೆರೆದಿತ್ತು

ಮೌನ ಧ್ಯಾನಗಳ ಶಾಂತಮೂರ್ತಿಯಾಗಿ
ಜಗದ ಮನವ ಮೋಡಿ ಮಾಡಿ
ಶಾಂತಿ-ಅಹಿಂಸೆಗಳ ಹರಿಕಾರ ನೀನಾದಿ

ಬೋಧಿವೃಕ್ಷದ ನೆರಳು
ನೀನೆ ನೀನಾಗಿ ಮನುಕುಲಕೆ
ಬುದ್ಧಂ ಶರಣಂ ಗಚ್ಫಾಮಿ
ಶರಣಂ ಸಂಘಂ ಗಚ್ಫಾಮಿ ದಾರಿದೀಪವಾದೆ

ಬುದ್ಧನೆಂದರೆ ಎದ್ದವ
ಭವ ಭಾವಗಳ ಗೆದ್ದವ
ಕಾಲನುದರದೊಳಗೆ ಬೆಳೆದ ಕಮಲವದನ
ಬೋಧಿವೃಕ್ಷ ಬಂಧು, ಮರಳುಗಾಡಿನ ಸಿಂಧು

***