ಇಷ್ಟೊಂದು ದೇವರ ಎಷ್ಟೊಂದು ದೇವರ
ಎಲ್ಲೆಲ್ಲಿ ನೋಡಿದರು ದೇವರೆ ದೇವರ

ಇಷ್ಟೊಂದು ದೇವರಲಿ ನಿನಗಾರು ದೇವರ
ನಿನಗ್ಯಾಕೆ ದೇವರ ನೀನೇ ದೇವರ

ಯಜಮಾನ ದೇವರ ಧಣಿಗಳು ದೇವರ
ಜನನಾಯಕರು ದೇವರ ಢಣನಾಯಕರು ದೇವರ

ಅಂಬಾರಿ ದೇವರ ಜಂಬೂಸವಾರಿ ದೇವರ
ಪೂಜೆಯ ದೇವರ ಜಾತ್ರೆಯ ದೇವರ

ಜನ ಮೆಚ್ಚೋ ದೇವರ ಜನ ಹಚ್ಚೋ ದೇವರ
ಜನರಿಂದ ದೂರವಿರೋ ಮುಗುಮ್ಮಾನೆ ದೇವರ

ಭಕ್ತರ ಮೈಮೇಲೆ ಬರುವ ದೇವರ
ಅವರ ತಲೆಮೇಲೆ ಕೂರುವ ದೇವರ

ಕುಂತ ದೇವರ ನಿಂತ ದೇವರ
ಮಲಕ್ಕೊಂಡು ಸುಖವಾಗಿ ನಿದ್ರಿಸುವ ದೇವರ

ಕುರಿಣಗಳ ಬಲಿ ಕೇಳುವ ದೇವರ
ಮಾಂಸ ಮದ್ಯಗಳ ಬೇಡುವ ದೇವರ

ಹಾಡಿಗೆ ನಿದ್ರಿಸುವ ರಸಿಕ ದೇವರ
ತೊಟ್ಟಿಲ ಸೇವೆಯ ಇಷ್ಟಾರ್‍ಥ ದೇವರ

ಘಂಟಾನಾದಕ್ಕೆ ಉತ್ತಿಷ್ಟ ದೇವರ
ಭಾಜಾಬಜಂತ್ರಿಯ ನರಶಾರ್‍ದೂಲ ದೇವರ

ಕಿಂಡಿಯೊಳಗೆ ಇಣುಕಿ ನೋಡುವ ದೇವರ
ಹುಂಡಿಯ ಮುಂದಿಟ್ಟುಕೊಂಡಿರುವ ದೇವರ

ಬೆತ್ತಲೆ ಸೇವೆಗೆ ಕಾಯುವ ದೇವರ
ಕತ್ತಲೆಗೆಲ್ಲೆಲ್ಲೋ ಮಾಯುವ ದೇವರ

ನಿನಗಾರೊ ದೇವರ ನಿನಗ್ಯಾಕೊ ದೇವರ
ನೀನೇ ದೇವರ ನಿನಗಿಲ್ಲೊ ದೇವರ
*****