ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ
ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ
ದಡವನಲೆಪಂಜದಿಂ ಪರಚಿ-ಮೇಲೇರಿ ಬರ-
ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ
ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ.
ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿರವಿದರ
ತಟದೆಲ್ಲೆಯಪಮಾನದಾರ್ತನಿರ್ಘೋಷ. ಇದ
ಸೆರೆಯೊಳಿಟ್ಟಾಳ್ವರಾರ್?-ಯೋ ವೈ ಭೂಮಾ ತತ್
ಸುಖಮೆಂಬ ಋಷಿವಾಣಿ ಅನುಭೂತವಾಗುತಿರೆ
ದಣಿವಿಲ್ಲದಲೆಯುವೀ ಮುನ್ನೀರ ಹರಹ ನಾ
ಕನಿಕರಿಸಿ ನಿಂದಿಹೆನು ಆ ಮಹಾಶಕ್ತಿ ಸಂ-
ಮುಖದಿ ಅದರ ಋತವನು ಸೋಂಕಿ ಅಲ್ಪತೆ ನೀಗಿ-
ಕ್ಷುಬ್ಬ ಜಗದೊಳು ಕ್ಷಾಂತಿಯಂತಿರುವ ಯುಕ್ತನಂತೆ
ಹರಿಯ ನಿಲುವೊಳು ಭವಿಗೆ ಮರುಗುತಿಹ ಭಕ್ತನಂತೆ.
*****