ನಗೂ ಎಂದರೆ ನಕ್ಕುಬಿಡೋದು
ಅಳೂ ಎಂದರೆ ಅತ್ತುಬಿಡೋದು
ಒರೆಸಿಕೊ ಎಂದರೆ ಒರೆಸಿಕೊಳ್ಳೋದು
ಇದೇ ನನ್ನ ಗೊಂಬೆ
ನನ್ನ ಚಲು ಗೊಂಬೆ

ನಡೀ ಎಂದರೆ ನಡೆಯೋದು
ಓಡೆಂದರೆ ಓಡೋದು
ಕೂರು ಎಂದರೆ ಕೂರೋದು
ಇದೇ ನನ್ನ ಗೊಂಬೆ
ನನ್ನ ಚೆಲು ಗೊಂಬೆ

ಧ್ಯಾನಿಯೆಂದರೆ ಧ್ಯಾನಿಸೋದು
ಯೋಗಿಯೆಂದರೆ ಯೋಗ ಮಾಡೋದು
ಸಮಾಧಿಯೆಂದರೆ ಸತ್ತಂತೆ ಇರೋದು
ಇದೇ ನನ್ನ ಗೊಂಬೆ
ನನ್ನ ಚೆಲು ಗೊಂಬೆ

ಇರಿಸಿದಲ್ಲಿ ಇದ್ದುಬಿಡೋದು
ಮಲಗಿಸಿದಲ್ಲಿ ಮಲಗಿರೋದು
ಕಂಡರೆ ಅಯ್ಯೋ ಅನ್ನಿಸೋದು
ಇದೇ ನನ್ನ ಗೊಂಬೆ
ನನ್ನ ಚೆಲು ಗೊಂಬೆ

ಒಲ್ಲೆನೆಂದೆಂದೂ ಅಂದುದಿಲ್ಲ
ಆಜ್ಞೆಯನೆಂದೂ ಮೀರಿದುದಿಲ್ಲ
ನನ್ನನದು ಧಿಕ್ಕರಿಸಿದ್ದಿಲ್ಲ
ಇದೇ ನನ್ನ ಗೊಂಬೆ
ನನ್ನ ಚಲು ಗೊಂಬೆ

ಎಷ್ಟು ಸಲ ಮುದ
ಎಷ್ಟು ಸಲ ಕ್ರೋಧ
ಎಷ್ಟಾದರು ನನ್ನದೆ
ಇದೇ ನನ್ನ ಗೊಂಬೆ
ನನ್ನ ಚೆಲು ಗೊಂಬೆ

ಇದು ನನ್ನ ಕೈಗೊಂಬೆ
ನಾನದರ ಕೈಗೊಂಬೆ
ನನ್ನ ಚೆಲು ಗೊಂಬೆ
ನಾನೇ ನನ್ನ ಗೊಂಬೆ
*****