ಬಿಳಿರಂಗೇ
ನಿನ್ನ ಸುಮ್ಮನೆ ಕಾಡುವ
ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ
ಹುಚ್ಚುಚ್ಚು ಗಾಢ
ಬಣ್ಣಗಳದೇನು ತಪ್ಪು?
ಕನಸುಗಳೂ ಇರಲಿ
ವಾಸ್ತವವ ಒಪ್ಪು!

ತಪ್ಪಿರುವುದೆಲ್ಲಿ?
ಬಣ್ಣಗಳ ಅರ್ಥೈಸಲಾಗದ
ನಿನ್ನ ಹುಂಬತನದಲ್ಲೇ?
ತುಂಟ ಬಣ್ಣಗಳೇ
ಬೇಡೆನುವ ನಿರ್ಲಿಪ್ತತೆಯಲ್ಲೇ?
ಬಣ್ಣಗಳೊಳಗು ಅರ್ಥವಾದರೂ
ಅರ್ಥವಾಗದಂತೆ
ನಟಿಸುವ ನಿನ್ನ ಜಾಣತನದಲ್ಲೇ?

ಬಿಳಿರಂಗೇ
ಮಾತು – ನೋಟ
ಸ್ಪರ್ಶದೊತ್ತಡಗಳ ಗಾಢಬಣ್ಣಗಳ
ಕಾಟಕ್ಕೆ ಸೋತು
ಒಡ್ಡುಗಳನೊದ್ದು ಹರಿದುಬಿಡದೇ
ಒಳಗೇ ಬತ್ತುವ
ನಿನ್ನೆದೆಯ ಜೀವನದಿ

ದನಿ ಎತ್ತಿ ಕರೆಯೆದೆಯೂ
ಮೋಡಿಗೊಳಿಸುವ
ಆಪ್ತಗಾನಕ್ಕೆ ಸೋತು
ಗುಪ್ತಗಾಮಿನಿಯಾಗಿ
ನಿಂತಲ್ಲೇ ಏಕೆ ಧುಮ್ಮಿಕ್ಕುತ್ತದೆ?

ಬಿಳಿರಂಗೇ
ಗಾಢಬಣ್ಣಗಳ ಮೇಲೆ
ಸುಮ್ಮನೇತಕೆ ಮುನಿಸು?
ಏಕೆ ಬಣ್ಣಗಳಿಗೆ
ಬುದ್ಧಿ ಕಲಿಸುವ
ಹುಚ್ಚು ಮನಸು?
ಗೆದ್ದರೂ ಸರಿ ಸೋತರೂ ಸರಿ
ಬಣ್ಣಗಳ ಸುಮ್ಮನೆ ಕ್ಷಮಿಸು
ತಪ್ಪು ನಿನ್ನದೂ ಅಲ್ಲ
ಗಾಢ ಬಣ್ಣಗಳದೂ ಅಲ್ಲ
ತಪ್ಪು – ಸರಿಗಳ ಲೆಕ್ಕ ಇಲ್ಲಾರಿಗೂ ಸಿಕ್ಕಿಲ್ಲ
ತಕ್ಕಡಿ ತೂಗಿಯೇ ಇಲ್ಲ!
*****