ಭೂಪಾಳಿ-ಝಂಪೆ

ನೋಡು ನೋಡೆಲೊ ದೇವ!
ಗತಿವಿಹೀನರ ಕಾವ,
ನೋಡು ನಿನ್ನಯ ರಾಜ್ಯದೊಳರಾಜಕತೆಯ!
ನೋಡು ಪಡುವಣ ದಿಕ್ಕ,
ನೋಡು ಇತಲಿಯ ಸೊಕ್ಕ,
ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧||

ಬಡ ತ್ರಿಪಲಿಯನ್ನಿತಲಿ
ಪಿಡಿದಿರುವುದೆನ್ನುತಲಿ
ಮೊರೆಯಿಡುವ ಕ್ರಂದನಕೆ ಕಿವಿಯ ಮುಚ್ಚಿಹೆಯಾ?
ತೋಳಿನಬ್ಬರವನ್ನು
ಜಗಕೆ ತೋರುವೆನೆನ್ನು
ತಿತಲಿ ಬೊಬ್ಬಿರಿವುದನು ತಾತ ಮೆಚ್ಚುವೆಯಾ? || ೨ ||

ನೆಲವ ನುಂಗುವ ಹಸಿವೆ
ತಡೆಯದರಚುತ ಕಸಿವೆ
ನೆನುತಿತಲಿ ತುಡುಕಿಹುದು ತ್ರಿಪಲಿಯನು ದೊರೆಯೆ!
ಹೆಬ್ಬುಲಿಯ ಕಂಗೆದುರು
ಸಿಕ್ಕಿದೆಳೆವುಲ್ಲೆಗರು
ವಂದದಿಂ ತಲ್ಲಣಿಪ ತ್ರಿಪಲಿಯನು ಪೊರೆಯೈ! || ೩ ||

ಮೊನ್ನೆವರಮೀ ಇತಲಿ
ಪರವಶತೆಯಿಂದಲಿಲಿ
ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯೆ,
ಇಂದು ಗರ್‍ಜಿಸುತಿಹುದೆ?
ಕಷ್ಟವಿನ್ನೊಂದಿಹುದೆ?
ಮಾನವರೊ? ದಾನವರೊ? ನಾನವರನರಿಯೆ! || ೪ ||

ಯಾವ ಇತಲಿಯ ವೀರ
ಮಾಝೀನಿ (Mazzini) ರಣಧೀರ
ಪರತಂತ್ರದಿಂದಲುದ್ಧರಿಸಿದನಿತಲಿಯಂ,
ಸಕಲರಿಗೆ ಸ್ವಾತಂತ್ರ್ಯ
ವೆಂದವನ ಗುರುಮಂತ್ರ
ವಿದನಿತಲಿ ಮರೆತಿಹುದೆ ಸೊಕ್ಕಡಂ ತಲೆಯಂ! || ೫ ||

ಪೂರ್‍ವದಿ ವಿಲಾಯಿತಿಯ
ಹೃದಯವಾವಳ ಗತಿಯ
ಭಾರದಿಂ ಜಗ್ಗಿದುದೊ ಆ ತುರುಕರವನೀ
ಅಬಲೆಯಾಗಿಹಳೀಗ,
ಇತಲಿಯವಳನು ಬೇಗ
ಸುಲಿಯುತಿದೆ- ಕದಕದಿಸು ತುರುಕರೆದೆ ಧಮನಿ! || ೬ ||

ಆಧುನಿಕ ರಾಜ್ಯಕಲೆ
ಯನ್ನರಿಯದವರ ಸಲೆ
ಬೆಂಬಲಿಸಿ ನೀನಿಂದು ನಡೆಸವರ ಪಡೆಯಾ!
ಅನುಕರಿಸಗತಿಕರನು,
ತೊರೆಯದಿರಪಥಿಕರನು,
ಸುಕ್ಕಿಸದಿರರ್‍ಧ ಚಂದ್ರ ಧ್ವಜವನೊಡೆಯಾ! || ೭ ||

ನವನಾಗರಿಕಳಲ್ಲ
ದೀ ತುರುಕಿಯಿರಸಲ್ಲ
ದೆಂದವಳ ರುಜೆಗೆ ನಾಗರವಿಷಮನೀಯೆ,
ಯಮವೈದ್ಯ ರೂಪಿಂದ
ನಟಸುವಿತಲಿಯ ಚಂದ-
ತ್ರಿಪಲಿಯನ್ನಪಹರಿಸಲಿದುವಲ್ತೆ ಮಾಯೆ? || ೮ ||

ಮುಸಲಮಾನರ ಧರ್‍ಮ
ಪಾಳೆಸಗುವೊಳ ಮರ್‍ಮ
ದಿಂದಿತಲಿ ಬಂದಿಹುದೆ ಕೊಳುಗುಳಕೆ ಮುಂದು?
ಪೈಗಂಬರನು (ಮಹಮ್ಮದ್) ನೀನೆ,
ಮರಿಯಾತ್ಮಜನು (ಯೇಸು) ನೀನೆ
ಎಂಬ ಸತ್ಯವನೀ ಜಗತ್ತರಿವುದೆಂದು? || ೯ ||

ಶತ್ರುವನು ಕೂರೆಂದು
ಯೇಸು ರೂಪದೊಳಂದು
ನೀನೊರೆದುದಕನರ್‍ಥವಾದಪುದೆ ಇಂದು?
ಅನಘರನು ಕಡಿಯೆಂದು,
ಗೆಳೆಯರನು ಬಡಿಯೆಂದು
ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು? || ೧೦ ||

ಧರ್‍ಮಕೆಡೆ ಬರಿದಾಯ್ತೆ?
ನೀತಿ ತೇಲುವುದಾಯ್ತೆ?
ನಿನ್ನ ತಿರೆಯೊಳಧರ್‍ಮಕಾದಪುದೆ ಗೆಲುಹು?
ಧರ್‍ಮವುಳ್ಳೆಡೆ ನೀನು
ಎಂಬರದು ಸಟೆಯೇನು?
ಧರ್‍ಮವನು ಕಾದು ಬಲಹೀನರನು ಸಲಹು! || ೧೧ ||

ಈ ಸಮರವನು ಮುಗಿಸು,
ಸೊಕ್ಕಿದವರನು ತಗಿಸು,
ಸ್ನೇಹಮಳೆಗರೆದು ಶಾಂತಿಯ ಬೆಳೆಯಿಸಿನಿಯಾ!
ನಿರಪರಾಧಿಯ ರಕ್ತ
ದಿಂದ ನೆಲ ಜಲ ಸಿಕ್ತ
ವಾಗದೊಲು ಕಾಪಾಡು ದೇವಕೀತನಯಾ! || ೧೨ ||
*****