ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು
ಮುರಿದೆ ನಿಜ, ನೀನೊ ಮುರಿದಿರುವೆ ಎರಡೆರಡು ಸಲ;
ಒಮ್ಮೆ ಹಾಸಿಗೆಯಲ್ಲಿ ಕೊಟ್ಟ ಭರವಸೆಯನ್ನು,
ಮತ್ತೆ ಕೂಡಿಕೆಯಾಗಿ ಕೊಟ್ಟ ಮಾತನ್ನು ಸಹ.
ಯಾಕೆ ದೂರಲಿ ಹೇಳು ಮಾತ ಮುರಿದವಳೆಂದು,
ನಾನೆ ಹಿರಿಯಪರಾಧಿ, ಮುರಿದಿರುವೆ ಎಷ್ಟೋ ಸಲ;
ಹುಸಿದೆ ನಿಜ ನಿನ್ನನ್ನು ದುರುಪಯೋಗಿಸಲೆಂದು
ಈಗ ಕುಸಿದಿದೆ ನಿನ್ನ ನಂಬಿ ನಿಂತಿದ್ದ ನೆಲ.
ನೀನು ಸತ್ಯತೆ, ಪ್ರೇಮ ನಿಷ್ಠೆಗಳ ಗಣಿಯೆಂದು
ಸಾರಿ, ನಂಬಿದ ಹಾಗೆ ನಟಿಸಿದ್ದೆ, ಕುರುಡಿಗೆ
ಕಣ್ಣ ಕೊಟ್ಟಿದ್ದೆ ನಿನ್ನನ್ನು ತಣಿಸಲು ಅಥವಾ
ತಾನು ಕಂಡದ್ದರ ವಿರುದ್ಧ ಮಾತಾಡೆಂದು
ನೀ ಚೆಲುವೆ ಎಂದು ಆಣೆಯ ಮಾಡಿ ಹುಸಿಯಾದೆ
ನಿಜದ ತಲೆ ಮೇಲೆ ಹೊಡೆದಂತೆ ಸುಳ್ಳಾಡಿದೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 152
In loving thee thou know’st I am forsworn
















