ಮನಸಿನ ಭ್ರಮೆ ತೀರಿಸಬಾರೆ ನೀರೆ          ||ಪ||

ತೀರಿಸದಿದ್ದರೆ ಆರಿಗ್ಹೇಳಲಿ ನಾನು
ವಾರಿನೋಟದಿ ಬಂದು ಕೂಡೇ ಬೇಗ ಒಡಗೂಡೆ      ||ಅ.ಪ.||

ಹಿಂದಕ್ಕೆ ಮೂವರ ಹಿರಿಯರ ಸಲಹಿದಿ
ಇಂದಾರಿಗುಸುರಲಿ ಚಂದಿರಮುಖಿಯೇ             ||೧||

ಬಾ ಬಾ ಅಂದರೆ ಬಾರಿ ಬಾರದೆ ನಿಂತಲ್ಲೆ
ಏ ನಾರಿ ಎರಡಿಲ್ಲ ಈ ಮಾತು ಸುಳ್ಳಲ್ಲ          ||೨||

ವಸುಧೀಶ ಶಿಶುನಾಳ ವಸತಿಯೊಳಿರುತಿಹ
ಕುಸುಮಲೋಚನೆಯನ್ನು ಕಸಿವಿಸಿಗೊಳಿಸದೆ       ||೩||

****