ಒಳ್ಳೆ ಬೆಳೆಗಳ ತಿಂದು ಪೊಳ್ಳು – ಜೊಳ್ಳಾಗಿಸುತ
ಬರಗಾಲ ತರುವುದಾ ಜಿಟ್ಟೆ ಯ ಹುಳ !
ಹಳ್ಳಿಗರ ಸಂತಸವ ಕೊಳ್ಳೆ ಹೊಡೆಯುತ್ತಿಹುದು,
ಕರಿಗಾಲಗುಣದ ಬಿಳಿಬಟ್ಟೆಯ ಹುಳ !


ಇರುವನಿತೆ ಕಿರುಬೆಳಕ ಮೆರೆಯಿಸುತ ಮಿರುಗಿಸುತ
ಹಾರುವುದು ಮುಗಿಲೊಳಗೆ ಹೊನ್ನೆಯ ಹುಳ!
ಗರುವ – ಹೆಮ್ಮೆ ಗಳಿಂದ ಕೊರಲೊತ್ತಿ ಬಡವರನು
ತೂರುವುದು ಹುಡಿಯೊಳಗೆ ಹೊನ್ನಿನ ಹುಳ !


ನೀರ-ಹರಿಯೊಳಗಿದ್ದು ಊರೊಳಗೆ ಚಳಿಯುರಿಯ
ಬೀರುವುದು ಹಾರಿ ಗುಂಗಾಡಿಯ ಹುಳ!
ಊರಿ ಬೆಂಕಿಯ ಕಿಡಿಯ, ಊರಿಗೂರನೆ ಸುಟ್ಟು
ಜಾರುವುದು ಕಿಡಿಗೇಡಿ ಚಾಡಿಯ ಹುಳ !


ಹಸಿದು ಉಣುತಿರುವಾಗ ಬಿಸಿಯನ್ನ ದಲಿ ಕಂಡು
ಕಸಿವಿಸಿಯ ಪಡಿಸುವುದು ಬಾಲದ ಹುಳ !
ಕಸಿದುಕೊಳ್ಳುವುದು ಬದುಕಿನೊಸಗೆಯನೆ ಹಗಲಿರುಳು
ಬಸಿರೊಳಗೆ ಕಚ್ಚುತಿಹ ಸಾಲದ ಹುಳ !


ಉರಿವ ದೀಪವ ಬಡಿದು ಹರಡುವುದು ಕತ್ತಲೆಯ
ಪರಪೀಡಕವು ಪೂರ್ಣ ಪಕ್ಕದ ಹುಳ !
ಅರುಹಿನೊಳು ಬೆಳಕನ್ನು ಮರವೆಯಲಿ ಹೂಳುವುದು
ಕುರುಡುಧರ್ಮಾಚಾರ ಕೊಕ್ಕೆಯ ಹುಳ !


ಮುದ್ದು – ಮುದ್ದೊಡವೆಗಳ ಮೆದ್ದು ಮಣ್‌ ಮಾಡುವುವು
ಗುದ್ದಿ ನೊಳಗಡಗಿರುವ ಗೆದ್ದಲು ಹುಳ !
ಇದ್ದ ಬುದ್ಧಿಯ ಮಾರಿ ಮೊದ್ದುತನ ಕೊಳ್ಳುವುವು
ಕೋಣೆಯೊಳೆ ಕುಳಿತಿರುವ ಹೊತ್ತಗೆಹುಳ !
*****