ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ?


ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ
ತಲೆವಾಗಿ ವಂದಿಸುವೆನೈ!
ಭಾರತೀಯರ ಮೇಲೆ ನೀ ಮಾಡಿದುಪಕಾರ
ಭಾರವಾಗಿಹುದು ಕಾಣೈ!


ನಿನ್ನ ಕೈ ಚಳಕದಾ ಹೊಲಬನರಿಯದೆ ನಿನಗೆ
ಹಳಿವನ್ನು ಹೊದ್ದಿಸುವರು-
ಬಣ್ಣವನೆ ನೋಡಿ ಕೋಗಿಲಿಗೆ ಕರಿಗಾಗೆಯೆಂ-
ದೆನುವ ಮತಿಮಂದಜನರು!


ಮುಳ್ಳ ಮಳೆಯಲ್ಲಿರುವ ಹೊಸಜೇನುಹುಟ್ಟಿನಲಿ
ಇನಿರಸವು ತುಂಬಿರುವೊಲು-
ಸುಳ್ಳಲ್ಲ, ನಿನ್ನ ಪ್ರತಿಯೊಂದು ಕೃತಿಯೊಳಗೊಳಗೆ
ಹುರುಳು ಹುದುಗಿಹುದು ಕೇಳು!


ನೀನಿಲ್ಲದಿರಲು ಭಾರತದ ಹಿರಿಹೊತ್ತಗೆಯು
ತಿರುಳಿಲ್ಲದಾಗಿರುವುದು-
ತನಿರಸವನೆಲ್ಲವನು ಹಿಂಡಿ ಹೊರದೆಗೆದ ಕ-
ಬ್ಬಿನ ಕೋಲಿನಂತಿರುವುದು.


ಸುಜನರನು ದುರ್ಜನರು ಯುಗ-ಯುಗಗಳಲ್ಲಿಯೂ
ಪೀಡಿಸುವರೆಂಬುದನ್ನು
ತ್ರಿಜಗಕ್ಕೆ ತಿಳುಹಲಿಕೆ ಭಾರತದ ನಾಟಕದಿ
ಸೂತ್ರಧರನಾದೆ ನೀನು !


ಧರ್ಮರಾಯನ ಧರ್ಮನಿಷ್ಠೆ, ಭೀಮನ ಬಲುಹು,
ಅರ್ಜುನನ ಅಸ್ತ್ರದರಿವು,
ನಮ್ಮೆಲ್ಲರಾ ಕಂಗಳೆದುರಿನಲ್ಲಿ ಕುಣಿಯುವುದು
ನಿನ್ನ ಗೈಮಯ ಫಲಿತವು !


ದುರ್ಯೋಧನನ ಧೈರ್ಯ-ಚಲದಂಕತನವ, ವಿದು-
ರನ ವಿಷ್ಣುಭಕ್ತಿಯನ್ನು,
ಸೂರ್‍ಯಾತ್ಮಜನ ದಾತೃಗುಣವ ಡಂಗುರ ಹೊಯ್ದು
ಜಗದಿ ಸಾರಿದೆಯೊ ನೀನು!


ಪಾಂಚಾಲಿನಿಯ ಪಾವನತೆಯು ಪಸರಿಸುವುದಕೆ
ನೆರವು ನೀ ನೀಡಿದೆಯಲ್ಲಾ?
ಚಂಚಲಾಕ್ಷಿಯ ಹೆಸರನಾರು ತಿಳಿಯುತ್ತಿರ್ದ-
ರೈ, ಪೇಳು ನೀ ಸೌಬಲಾ!


ಕುರುವಂಶಜಾತರನು ಹುರಿಗೊಳಿಸಿ ಸಂಗರಕೆ
ಪರಮಾತ್ಮ ಕೃಷ್ಣನಿಂದೆ-
ಪರಮಗೀತೆಯನು ಹಾಡಿಸಿದೆ ಜಗಕೆಲ್ಲ ಉಪ-
ಕೃತಿಯ ಹೊರೆಯನು ಹೊರಿಸಿದೆ!

೧೦
ಇನ್ನೆಂದು ಬಂದು ನೀ ಭರತಖಂಡದಲಿ ಹೂ-
ಡುವೆ ನಿನ್ನ ನಾಟಕವನು ?
ಮನ್ನೆಯನೆ ತಿಳುಹುವುದು ಜನಕೆ ‘ಸತ್ಯಕ್ಕೆ ಜಯ
ವುಂಟೆ’ಂಬ ತತ್ತ್ವವನ್ನು !

೧೧
ಧೀರುರೇ, ಭಲಭಲರೆ ! ಶಕುನಿಯೇ ನಿನಗೆ ನಾ
ತಲೆವಾಗಿ ವಂದಿಸುವೆನು.
ಭಾರತೀಯರಿಗೆಲ್ಲ ಜೀವನದ ಸಾರವನು
ಕಲಿಸಲಿಕೆ ಬೇಕು ನೀನು!
*****