ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು
ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ
ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ
ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ.

ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು
ಹಸಿತ ವದನದಿ ತೋರಿ ಕುಣಿಕುಣಿದು ನಲಿದಾಡಿ
ನಸುಮುನಿಸ ಬೀರುತ್ತ ಉದ್ದವೋ ಗಿಡ್ಡವೋ
ಉಸಿರೆಳೆದು ಭಯರೂಪು ತಾಳುತ್ತ ನಡೆಯುತಿಹೆ.

ನೆಲಕಿಂತ ಆಗಸವೆ ನಲಿಯಲ್ಕೆ ಚೆಲುವೆಂದು
ಅಲೆದಲೆದು ತಿರೆ ನೋಡಿ ನಗುತಿರುವೆ ಹಾಸ್ಯದಿಂ
ಮೇಲಿಂದ ಧರೆಯೊಲವ ನೋಡುವುದೆ ಸೂಗಮೆಂದು
ಹಾಲಿನಂತೆಸೆಯುತಿಹೆ ನಭಮಾಡದಲಿ ನಿಂದು.

ಬಿತ್ತರದ ಗಗನದಲಿ ತಡೆಯುವವರಾರಿಲ್ಲ
ಚಿತ್ತಾರಮಂ ಬರೆದು ಮುಖಗೊಂಡು ಸಿಂಗರದಿ
ಚಿತ್ರತರ ಜಲಧಿಗನ್ನಡಿಯಲ್ಲಿ ಮೊಗ ನೋಡಿ
ಮುತ್ತುದುರಿಸುತ್ತಿರುವೆ ಜಲದೇವಿಯಾಗೆಸೆವೆ.

ಬಾನ ಬೇಸಿಗಯುಂಡು ನಕ್ಷತ್ರದೊಡಲಲ್ಲಿ
ನೀನು ಮೆರೆಯುತ್ತಿರಲು ಮಚ್ಚರಿಸಿ ನೀರೆಲ್ಲ
ಕಾಣಿಸದೆ ಮೈಮರೆಸಿ ಗಗನವೇರುತ್ತಿರಲು
ಮೌನವೇ ತುಂಬಿತ್ತು ಬಲು ಬಿಸಿಲ ಘಾಸಿಯಲಿ.

ಇಲ್ಲ ನೆರೆ-ಇಲ್ಲ ಕರೆ ನಿನ್ನ ಸುಳಿವಿನ್ನಿಲ್ಲ
ಬಲ್ಲಿದರು ಬಡವರುಂ ಮೂಕಜಂತುಗಳೆಲ್ಲ
ಅಲ್ಲಲ್ಲಿ ತೊಳಲುತ್ತಲರಸಿದರು ಬೇಸತ್ತು
ಮಲ್ಲಿಗೆಯ ನಗುವೆಲ್ಲ ಮಂಕಾಯ್ತು ನೀನಿರದೆ.

ನಿನಗೆ ತಿಳುಹುವರಾರು ನಿನ್ನ ಕರೆವವರಾರು?
ನಿನಗೆ ಕಷ್ಟವನೊರದು ಬಾಯೆನುವರಾರೆಂದು
ಕಣುಗಳುಂ ಬತ್ತುತಿರೆ ರಾಯಭಾರಿಯು ವಾಯು
ಜನದುರಿಗೆ ದಯೆಗೊಂಡು ನಿನ್ನೆಡೆಗೆ ಹಾರಿದನು.

ಅಂದಾ ಭಗೀರಥನು ಭಾಗೀರಥಿಯ ತಂದ
ಇಂದೆಮಗೆ ಗಗನದಿಂ ವಾಯುತಹ ನಿನ್ನನ್ನು
ಚೆಂದದಿಂದಿಳಿದಿಳಿದು ಬಾ ತಾಯಿ ಮೈದಳೆದು
ಬಂದೆಮ್ಮ ಒಳಹೂರಗೆ ಜೀವದುಂಬಿಸು ದೇವಿ.

ಮಳೆಯ ರೂಪವ ತಳೆದು ಹನಿಯ ಕೈಗಳ ಪೊಂದಿ
ಇಳೆಗಿಳಿದು ಬಾ ನಮ್ಮ ಚೆಲುವ ಬನ ತೋಟಗಳ
ನಲಿಸಿ ನಗಿಸುತಲೊಮ್ಮೆ ತವರೂರ ಸಂಚರಿಸು
ಜಲದೊಡಲಿನಿಂ ಬಂದ ವಾಹಿನಿಯರಂ ನೋಡು.

ಬರುವ ರಭಸಕೆ ಕಪ್ಪು ಮುಪ್ಪಾಗಿ ಮುರಿಯುತಿದೆ.
ಹೊರಟಳೆಂದಾ ಗಗನ ಕತ್ತಲೆಯ ಕಾರುತಿದೆ
ಮರೆಯಾದ ನೇಸರಂ, ನೀನಲ್ಲಿ ನಡೆದಿರಲು
ಕರಗಿದೆದೆಯಿಂ ಬಂದೆ ಬಾ ತಾಯಿ ಬಾಗುವವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋರಾಡುತ್ತೇನೆ ಶಬ್ದಗಳಿಂದ
Next post ನಮ್ಮ ಶಾಲೆ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…