(ನನ್ನ ಗೆಳೆಯನೋರ್ವನಿಗೆ ಗಂಡುಮಗು ಹುಟ್ಟಿತೆಂಬ ವಾರ್ತೆ ಕೇಳಿದಾಗ ಬರೆದು ಕಳಿಸಿದುದು.)


ಗಂಡು ಜನಿಸಿತೇನು ಗೆಳೆಯ,
ಗಂಡು ಗಂಡಸಾಗಲಿ!
ಹಾಲು, ಹಣ್ಣು ಕದ್ದುತಿಂದು
ಪುಂಡ ಹುಡುಗನಾಗಲಿ !


ಶಾಲೆಗವನ ಅಟ್ಟಿ, ಬಿಟ್ಟ,
ಮನೆಯ ಪಾಠ ಕಲಿಯಲಿ!
ಲತ್ತಿ ಪಟ್ಟು ಹಾಕಿಬಿಟ್ಟ,
ಹುಲಿಯಹೊಡೆವನಾಗಲಿ!


ಕಲ್ಲುಪೂಜೆ ಕಲಿಸಿಬಿಟ್ಟ
ದೇವರಿಲ್ಲವೆಂದುಹೇಳು!
“ಇರುವನಲ್ಲ” ವೆನ್ನಲವನು,
ಸತ್ತ ದೇವರೆಂದು ಹೇಳು!


ಹಳೆಯಧರ್ಮ ಹೇಳಿಬಿಟ್ಟ,
ಧರ್ಮಲಂಡನಾಗಲಿ!
ತಲೆಗೆ ತಡೆಯಗಟ್ಟಿಬಿಟ್ಟ,
ಬುದ್ಧಿಶಕ್ತಿ ಬೆಳೆಯಲಿ!


ಮದುವೆಗಿದುವೆ ಮಾಡಿಬಿಟ್ಟ,
ಅವನೆ ಮಾಡಿಕೊಳ್ಳಲಿ!
ಚಿನ್ನ-ಬೆಳ್ಳಿ ಗಳಿಸಿಬಿಟ್ಟ,
ತಾನೆ ಹೊಟ್ಟೆ ಹೊರೆಯಲಿ !
*****