ಗುಂಡನು ಆರು ಗಂಟೆಗೇ
ಏಳುವ ಚಿಲಿಪಲಿ ಹಕ್ಕಿ ಕೂಗಿಗೆ

ಮೈಕೊಡಹುವ ನಿದ್ದೆ ಬಿಟ್ಟು
ಅಂಗೈ ನೊಡಿ ನಮಿಸುತಲಿ
ದೇವರ ಮಂತ್ರ ಭಜಿಸುತಲಿ
ಪೂರೈಸುವ ಬೆಳಗಿನ ಕೆಲಸವನು

ಜಳಕವ ಮಾಡಿ
ತಿನ್ನುವ ತಿಂಡಿ
ಓದುವ ಕೊಠಡಿಗೈತಂದು
ಅಂದಿನ ಪಾಠವ
ಮುದದಲಿ ಓದುತ
ಪುಸ್ತಕ ಜೋಡಿಸಿಕೊಳುವಂದು

ಚೀಲವ ಬೆನ್ನಿಗೆ
ಬೂಟ್ಸ್‌ನು ಕಾಲಿಗೆ
ಟಾಟಾ ಹೇಳುವ ತಾಯಿಗೆ
ಗೆಳೆಯರ ಮನೆಗೆ
ತೆರಳುತ ರಸ್ತೆಗೆ
ಹರಟುತ ನಡೆವನು ಶಾಲೆಗೆ

ಪ್ರಾರ್ಥನೆ ಸಲ್ಲಿಸಿ
ಶಿಸ್ತನು ಪಾಲಿಸಿ
ತರಗತಿ ಸೇರಿಕೊಳ್ಳುವನು
ಗುರುಗಳ ಪಾಠ
ಚಿತ್ತವ ಕೊಟ್ಟು
ಮನನ ಮಾಡಿಕೊಳ್ಳುವನು

ಶಾಲೆಯು ಬಿಡಲು
ಗೆಳೆಯರು ಕೂಡಲು
ಓಡುವ ಮೈದಾನದ ಕಡೆಗೆ
ತರ ತರದಾಟವ
ಆಡುತ ದಣಿವ
ಚಲಿಸುತ ಹರಟುತ ಮನೆಯೆಡೆಗೆ

ತಾಯಿಯು ಇತ್ತ
ತಿಂಡಿಯ ತುತ್ತ
ಮುಗಿಸುತ ಹೋಮ್ ವರ್ಕ್ ಮಾಡುವನು
ಊಟದ ವೇಳೆಗೆ
ತಾಯಿಯ ಕರೆಗೆ
ಊಟದ ಮನೆಗೆ ಓಡುವನು

ಮಲಗುವ ಮನೆಗೆ
ಹೋಗುತ ಬೆಚ್ಚಗೆ
ಉರುಳುತ ನಿದ್ದೆಗೆ ಜಾರುವನು
ದಣಿದು ಬಂದವ
ಕನಸು ಕಾಣುವ
ಸುಖದಿ ನಿದ್ದೆಯ ಮಾಡುವನು.
*****