ಕೆಂಡ ಕಾರುತ ಸೂರ್ಯ
ಹುಟ್ಟಿ ಬರುವುದನ್ನೆ
ತವಕದಿಂದ ನೋಡುತ್ತಿದ್ದೆ.
ಸೂರ್ಯಕಾಂತೆಯರ ದಂಡು
ನಿಗಿನಿಗಿ ಕೆಂಡ ಸೂರ್ಯನ
ಬಿಗಿದಪ್ಪಲು ಕಾದಿರುವ,
ತಪ್ತ ಕಾಂತೆಯರು-
ಆಕಾಶ ನೋಡುತ್ತಿರಲು
ಭೂಮಂಡಲಕೆ ಹನಿಹನಿಯಾಗಿ
ತೊಟ್ಟಿಕ್ಕುವ ಕೆಂಡದ ಮಳೆ
ರಕ್ತದ ಹೊಳೆಯಲಿ-
ತಂಪು ಮಾಡಿ ಕಾವು ಕೊಟ್ಟು
ಹಸಿರು ಬೆಳೆ ಬೆಳೆಯಲು
ಭೂಮಿಯ ತಗ್ಗು ದಿನ್ನೆಗಳ
ಸರಿಪಡಿಸಿ, ಹದಗೊಳಿಸಿ
ನೀರು ಗೊಬ್ಬರ ನೀಡಿ
ಸೊಕ್ಕಿನಿಂದ ಬರುವ
ಬೆಳೆಯ ಸಿರಿ ನೋಡಲು
ಮಳೆಯ ಹನಿ ಕಾದಿರಲು
ಭೂತದಲಿ ಹರಿದ ರಕ್ತದ
ಕಮಟು ವಾಸನೆ
ಮೂಗಿಗೆ ಬಡಿದಾಗ
ಕ್ಷಣಕಾಲ ಖಿನ್ನತೆ ಆವರಿಸಿ
ಮತ್ತೇ ಹಟ ತೊಟ್ಟು
ಹರಗುತ್ತ ಬಿರು ನೆಲವ
ಹದಗೊಳಿಸುತ್ತ
ತಗ್ಗು ದಿನ್ನೆಗಳ ಸರಿಪಡಿಸಿ
ಹುಲುಸಾಗಿ ಬರುವ
ಸಮತೆಯ ಬೆಳೆ
ಬೆಳೆಯಲು ಹೊರಟಿರುವರು
ಸೂರ್ಯಕಾಂತೆಯರು.
*****


















