ಬಿಡಬೇಡ! ಕಬ್ಬಿಣದ ಮೊಳೆಯನ್ನು ಜಡಿಯೈ!
ಬಿಡಬೇಡ! ಆಣಿಯಾ ತಲೆಗೊಂದು ಹೊಡಿಯೈ!
ಬಿಡಬೇಡ! ಬಲದಿಂದ ಕಬ್ಬಿಣವ ಹಿಡಿಯೈ!
ಬಿಡಬೇಡ! ಕಾದಿರಲು ಸಲೆಸಾಗ ಬಡಿಯೈ!
ಕೊಟ್ಟು ಮನವನು ಕೆಲಸಮಾಡು ಸರಿಯಾಗಿ,
ಮಟ್ಟಮೊದಲೇರಬೇಕೆಲೆ ತುದಿಗೆ ಹೋಗಿ,
ಕಟ್ಟಿ ಕೈಗಳ ಮೇಲೆ ನೋಡುವವ ಹೇಗೆ
ಮುಟ್ಟುವವ ಬೆಟ್ಟದಡಿಯಿಂದದರ ಮೇಗೆ.
ಎಡವಿದರು ತಡವಿದರು ಮನಗುಂದ ಬೇಡ!
ಬಿಡುವುದೇ ಬಲೆ ಹೆಣೆವ ಯತ್ನವನು ಜೇಡ!
ತಡೆದು ಹೋಗದೆ ಬಿದ್ದು ಮಲಗುವವ ಮೂಢ!
ಇಡು ಹೆಜ್ಜೆ, ನಡೆ ಮುಂದೆ, ನೆಲೆಸೇರು, ಗಾಢ!
*****
(ಕವಿಶಿಷ್ಯ)



















