ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ದೈತ್ಯರೆಂಬವರ ಕರೆಕಳಿಸಿ
ಹೊಟ್ಟೆಗೆಂಬವರ ಹಿಡಿದೆಳಿಸಿ
ಮುಟ್ಟದೆ ಮೈದೊಗಲನು ಸುಲಿಸಿ
ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ಒಕ್ಕಲಮಕ್ಕಳ ಹಿಡಿದೆಳೆದು
ಸಾಲದಪಾಶದಿ ಬಿಗಿಬಿಗಿದು
ಹೊಟ್ಟೆಯಹೊದಿಕೆಯ ಹರಿದೊಗೆದು
ಬಿಸಿನೆತ್ತರವನೆ ಸುರಿಸುರಿದು

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ!

ಹೆಣ್ಣಿನಜಾತಿಯ ಹೆಡಮುರಿಕಟ್ಟಿ
ಧರ್‍ಮಸ್ಥಂಭಕೆ ಕೈ ಕಟ್ಟಿ
ಕಂಗುಡ್ಡಿಗಳಂ ಹೊರಗಟ್ಟಿ
ನರಕದ ಕೂಪದ ನೆಲೆಗಟ್ಟಿ

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !

ಅಂತ್ಯಜನೆಂಬನ ಅಗ್ನಿಗೆ ಕೊಟ್ಟು
ಕೊಲ್ಲದೆ ಗೋಳಿನ ಗಾಣದೊಳಿಟ್ಟು
ಅನ್ನವನಿಕ್ಕದೆ ಸೆರೆಯೊಳಗಿಟ್ಟು
ಹದ್ದು ನಾಯಿಗಾ ಹೆಣವನೆ ಬಿಟ್ಟು

ಇದುವೇ ಪಾಪಿಯ ಯಮಲೋಕ !
ಭಾವಿಕರೆಂಬರು ಭೂಲೋಕ !
*****