(ವಿಸ್ತೃತ ಕವನ)

ಮಾತನಾಡಬೇಕು ನಾವು
ಒಂದು ಘಳಿಗೆ ಕುಳಿತು
ಬಿಟ್ಟು ಎಲ್ಲ ಹಮ್ಮು ಬಿಮ್ಮು
ಹೃದಯ ಬೆಸೆಯಬೇಕು ||

ಆಕಾಶವು ಅತ್ತಿದೆ
ಧರೆ ಧಗಧಗ ಉರಿದಿದೆ
ಪಂಚಭೂತ ನಮ್ಮ ನೋಡಿ
ನೇಣುಗಂಬ ಹುಡುಕಿದೆ
ಉಳಿಯಲಿಲ್ಲಿ ಎಲ್ಲ
ಎಲ್ಲ ಬದುಕಲಿ
ನಮ್ಮ ಸಾವು ನೋಡಿ ಅವು
ಮರೆಯಾಗದಿರಲಿ || ಅ.ಪ. ||

ದಾರ ಏಕೆ ದೂರ ಬೇಕೆ
ಮಾತನಾಡುವಾಗ
ಬೇಲಿ ಬೇಡ ನೋಟ ಇರಲಿ
ಮನಸು ಕೂಡುವಾಗ
ಸೇತುವೆಗಳು ಮುರಿದಿವೆ
ಮತ್ತೆ ಕಟ್ಟುವ
ಎಲ್ಲ ಕೂಡಿ ಕಟ್ಟುವಾಗ
ಹೃದಯ ಹುಡುಕುವ

ಹಂಚಿಕೊಂಡ ರಕ್ತವೊಂದೆ
ರಕ್ತ ಹರಿವುದೇಕೆ?
ಹಾಲೂಡಿದ ನೆಲವದೊಂದೆ
ಇಲ್ಲಿ ಕದನವೇಕೆ?
ಕುರುಕ್ಷೇತ್ರವ ತಿಳಿದ ಮನಕೆ
ಕುರುಪಾಠವೇಕೆ
ಹಿಟ್ಲರನ ತಿಳಿದ ಮೇಲೆ
ಅವನ ದಾರಿಯೇಕೆ
ರಾಮಾಯಣ ತಿಳಿದಿರುವಾಗ
ಮತ್ಯಾಕೆ ರಾಮಾಯಣ
ಹುಟ್ಟದಿರಲಿ ಬಾಂಬುಗಳು
ಅವಕೆ ತಿಥಿ ಮಾಡೋಣ |

ನನಗೆ ನೀನು ನಿನಗೆ ನಾನು
ಇದು ಅಲ್ಲವೆ ಸತ್ಯ
ಇಂತಿರಲು ಕಲಹವೇಕೆ?
ಕಾಣದವನೆ ಮಿಥ್ಯ |

ನಡೆದ ದಾರಿ ಹಾಗಿರಲಿ
ಹೆಜ್ಜೆ ಮುಂದೆ ಇರಲಿ
ಆಕಾಶವು ಅಳದಿರಲಿ
ನೆಲವು ಕುಸಿಯದಿರಲಿ |
*****