ಇದು ಎಂಥ ಶಾಪ
ಈ ಯಕ್ಷನಿಗೆ ಪಾಪ
ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ
ವಿರಹ ತಾಪ
ಈ ಇಂಥ ಆಷಾಢ ದಿನಗಳಲ್ಲೇ

ಹಾತೊರೆಯುವನು
ಕಾತರಿಸುವನು
ಒಂದು ಮೋಡವ ಕರೆದು ಕೋರುವನು

ಮೋಡವೇ ಆಕಾಶದ ಪವಾಡವೇ
ನೀನೆಲ್ಲಿಗೆ ಧಾವಿಸುತಲಿರುವೆ ಇಂತು
ಕೇಳು ನನ್ನ ಮಾತುಗಳ ಕ್ಷಣ ಇಲ್ಲಿ ನಿಂತು
ನನ್ನ ಕಾಂತೆಯಿರುವಳು ಬಲು ದೂರ
ನೀಡು ನೀನವಳಿಗೆ ನನ್ನ ಶೋಕದ ವಿಚಾರ

ಹೀಗನ್ನುವನು ಮೋಡವ ಹಿಡಿದು ನಿಲ್ಲುವನು
ಇಡೀ ಕಾವ್ಯವನೆ ಹರಿಯಬಿಡುವನು
ಅಲ್ಲಿ ಹೋಗೆನ್ನುವನು ಇಲ್ಲಿ ಹೋಗೆನ್ನುವನು
ಆ ಚಂದ ನೋಡು ಈ ಚಂದವ ಹಾಡಿ ಹೊಗಳು
ಎನ್ನುವನಲಾ
ಆ ಮೋಡಕು ಯಾವಾತುರವಿಲ್ಲ

ಇದು ವಿರಹಗೀತೆಯೊ ಬದುಕಿನ ವಿಶಾಲತೆಯೊ
ಎಲ್ಲಿ ಯಕ್ಷ ಎಲ್ಲಿ ಮೋಡ
ಎಲ್ಲಿ ಉಜ್ಜಯಿನಿ
ಎಲ್ಲವನ ವಿರಹಿಣಿ

ಕವನದ ಕಾರಣ ಕೇಳುವರೆ
ಮೋಡಕೆ ಕಾರ್‍ಯವ ಹೇಳುವರೆ
ಕಾರ್‍ಯ ಕಾರಣಗಳು ಮಹಾಕವಿಯೊಬ್ಬನ
ಕಲ್ಪನಾವಶವಾಗವೇ
*****