ಕಾಗೆಯೊಂದು ಹಾರಿ ಬಂದು
ಸೇರಿತು ಕೋಗಿಲೆಯ ಗುಂಪೊಂದನು

ಸ್ನೇಹಿತರೊಂದಿಗೆ
ಸಭೆಯ ಸೇರಿಸಿತೊಂದು ದಿನವು
ದೇವನೊಲಿದಾತನೆಂದು
ಸ್ವರ್ಗದಿಂದ ಬಂದಿಹನೆಂದು
ಹೇಳಿತು ಕಾಗೆಯು ಸಭೆಯಲಿ

ಸೊಟ್ಟ ಮೂತಿಯ
ಅತ್ತಿತ್ತ ಕೊಂಕಿಸಿ ನುಡಿಯಿತು
ತನ್ನ ವಕ್ರ ದನಿಯಲಿ
ತಾನು ನಿಮ್ಮ ರಾಜನೆಂದು
ಕಳುಹಿಸಿದನು ಆ ದೇವನಿಲ್ಲಿಗೆ

ನಮಗಿಲ್ಲದ ರಾಜ ಇವನೆಲ್ಲಿಯವ
ಎಂದಿದನು ಕಂಡು
ಹೆದರಿದವು ಕೋಗಿಲೆಗಳು
ಕಳೆದವು ದಿನಗಳೊಂದೊಂದು

ಕೋಗಿಲೆಯ ಮುದ್ದಾದ ಮರಿಯೊಂದು
ಕಾಣದಾಯತೊಂದು ದಿನವು
ಮರುಗಿದವೆಲ್ಲಾ ಕೋಗಿಲೆಗಳು
ಸಂತೈಸಿದವು ಅದರ ತಾಯಿಯ
ಮರಿಯ ತಿಂದ ಕಾಗೆಯು
ತೇಗಿದ್ದು ತಿಳಿದಾಕ್ಷಣದಲ್ಲಿ
ಸಿಟ್ಟಿಗೆದ್ದವು ಕೋಗಿಲೆಗಳೆಲ್ಲಾ ನೋವಿನಲಿ
ಕ್ರೂರ ಬುದ್ಧಿಯ ಕಾಗೆಯನು

ಕೊಕ್ಕಿನಲಿ ಕುಕ್ಕಿ ಕುಕ್ಕಿ ಪುಚ್ಚವ ಕಿತ್ತು
ಹೊರ ನೂಕಿದವು ತಡಮಾಡದೆ

ಸಂತಸದಿ ಕುಣಿಯುತಲಿ
ತಮ್ಮ ಮರಿಗಳೊಂದಿಗೆ ಒಗ್ಗಟಿನಲಿ
ಬಾಳ ನಡೆಸಿದವು ನೆಮ್ಮದಿಯಿಂದಲಿ
*****