ಧರ್ಮಯುದ್ದ

(ಮಯಿ ಸಂನ್ಯಸ್ಯ ಯುದ್ಧ್ಯಸ್ವ)

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಗಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು.

ಹಿಂದೆ ಅಸುರರು ಕೊಬ್ಬಿ, ಸುರನರ
ರಂದಬಾಳನು ಮೆಟ್ಟಿ, ಹಿಂಸಾ
ನಂದ ಯೋಗಿಗಳಾಗಿ ಭೂಮಿಗೆ ಭಾರವೆನಿಸಿರಲು,
ತಂದೆ, ನೀ ಮಾಧವನುಮಾಧವ
ನೆಂದು ಪರಿಪರಿ ಪೊಗಳೆ, ಕರಗಿದೆ,
ನೊಂದೆ, ಬಿಡಿಸಿದೆ ಲೋಕಕಂಟಕರಿಂದ ಭಕ್ತರನು.

ಯುದ್ಧವೆಂಬ ಪಿಶಾಚ ಯಜ್ಞಕೆ
ಬದ್ಧರಹ ರಾಕ್ಷಸರ ಸಾಹಸ
ಬುದ್ದಿ ಕೌಶಲವೇಕೆ? ಐಸಿರಿಯೇಕೆ? ಬಿಸುಡು, ಸುಡು!
ಯುದ್ಧವೇ ತಂದೊಡ್ಡೆ, ಯುದ್ಧವ
ಯುದ್ಧದಿಂದಲೆ ಯಜ್ಞಮಾಡುವ
ಸಿದ್ದಿಯನು ನೀ, ದೇವ, ಬೆಸಸಿದೆ ಜಗವನುದ್ಧರಿಸೆ.

ಬೇಡುವೆವು, ಬಾ, ಸುಜನಪಾಲಕ.
ಹೂಡು ಧರ್‍ಮವ, ಧರ್‍ಮರಕ್ಷಕ,
ನಾಡ ಕಾವಲ ದಳಕೆ ಕೂಡಲಿ ನಾಡ ಬಲವೆಲ್ಲಾ.
ಓಡಿಹೋಗಲಿ ಭಯದ ನುಡಿಗಳು,
ಮೂಡಿ ತೂಗಲಿ ನಗುತ ಬೆಳೆಗಳು,
ನೀಡು ದಯವನು ದಣಿಗೆ, ನೆಮ್ಮದಿ ಬದುಕ ಬಡವನಿಗೆ.

ಕೆಣಕಿದರೆ ಬಿಡದೆತ್ತಿಕೊಂಡೆವು-
ಮಣಿವೆವೇ ನಾವಿನ್ನು ? ಕಾಳಗ
ದಣಿಗೆ ಮುಡಿಪಾಗಿಟ್ಟು ತನುಮನಧನವ ತೇಯುವೆವು!
ಋಣವಿದಲ್ಲವೆ ಭರತಮಾತೆಯ?
ಋಣವಿದಲ್ಲವೆ ದೇವಪಿತೃ‌ಋಷಿ
ಗಣದ ? ಮಡಿದಾ ಸತ್ಯಧರ್ಮ ಸ್ವತಂತ್ರ ಸಾಧಕರ ?

ಗೆದ್ದು ಬಿಟ್ಟೆವು! ಹುಬ್ಬ ಹಾರಿಸಿ-
ಮದ್ದು ಗುಂಡನು ಸುರಿಸಿ, ಹೊಸ ಹುಸಿ
ಸುದ್ದಿಗಳ ತೂರಾಡಿ, ನಂಬಿಸಿ, ಕೆಂಡಮಳೆಗರೆದು,
ಬಿದ್ದು ಹೆಣ್ಗಳ ಮೇಲೆ, ಹಸುಳೆಯ
ಗುದ್ದಿ, ದಾಸ್ಯವ ಹೊರಿಸಿ-ನಲಿವಿರ
ಗೆದ್ದು ಬಿಟ್ಟೆವು! ಎನುತ?-ಗೆಲುವಿರ ನೀವು ದೇವರನು!

ಗೆಲವು ನಮ್ಮದು, ಮಾಯಕಾರರೆ!
ಗೆಲವು ನಮ್ಮದು, ದ್ರೋಹಿಗಳೆ! ಕಡೆ
ಗೆಲವು ನಮ್ಮದು, ನಮ್ಮ ದಿವ್ಯ ಜ್ಯೋತಿ ನಮಗಿಹನು;
ಗೆಲವು ಶ್ರೀ ಜಯಚಾಮರಾಜಗೆ!
ಗೆಲವು ಬಿಡುತೆಗೆ, ಸಾಧು ಜನತೆಗೆ,
ಗೆಲವು ಶಾಂತಿಯ ಸರ್ವಸಮತೆಯ ಸುಖದ ಜೀವನಕೆ!

ಮಂಗಳಂಗಳನಿಳೆಯ ಸರ್‍ವ ಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಒಲವೆ, ಮುಕ್ತರ ನಲಿವೆ, ಕಾಪಾಡು.
ಕಂಗೆಡುವ ಮದದುಬ್ಬಿನಲಿ ರಣ
ದಂಗಣದ ಕಾಳ್ಕಿಚ್ಚನೆಬ್ಬಿಸಿ
ಭಂಗಪಡುವ ದುರಾಸೆಯನ್ನು ಮುರಿ, ಗೆಲಿಸು ಶಾಂತಿಯನು.

ಓಂ ಶಾಂತಿಶ್ಶಾಂತಿ ಶಾಂತಿಃ
*****
೧೯೪೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರುಣಿಯ ನೋಡಿದಿರಾ
Next post ಬಂಡಾಯ : ಯಾಕೆ ಜೀವಂತ?

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…