ಅಪ್ಪ ಅಮ್ಮ ಅನ್ನು
ಕನ್ನಡ ಉಳಿಯುವುದು
ಕಳ್ಳು ಬಳ್ಳಿ ತಾನೆ
ನಂಟನು ಬೆಸೆಯುವುದು

ಅಕ್ಕಿ ರಾಗಿ ಅನ್ನು
ಕನ್ನಡ ಉಳಿಯುವುದು
ಕಾಳು ಕಾಡ್ಡಿ ತಾನೆ
ಹಸಿವನ್ನು ನೀಗುವುದು

ಹಳ್ಳ ಕೊಳ್ಳ ಅನ್ನು
ಕನ್ನಡ ಉಳಿಯುವುದು
ನೀರೊಂದಿದ್ದರೆ ಸಾಕು
ಊರೂ ಬೆಳೆಯುವುದು

ಗಿಡ ಮರ ಅನ್ನು
ಕನ್ನಡ ಉಳಿಯುವುದು
ಹೂವು ಹಣ್ಣು ಬೀಜ
ಬಸಿರು ಬೆಳೆಯುವುದು

ಗಾಳಿ ಬೆಂಕಿ ಅನ್ನು
ಕನ್ನಡ ಉಳಿಯುವುದು
ಬೆಳಕೊಂದಿದ್ದರೆ ಸಾಕು
ಕತ್ತಲು ಹರಿಯುವುದು

ತಾಳು ಬಾಳು ಅನ್ನು
ಕನ್ನಡ ಉಳಿಯುವುದು
ಹಮ್ಮನು ಬಿಟ್ಟರೆ ತಾನೆ
ಒಮ್ಮತ ಮೂಡುವುದು.
*****