Home / ಕವನ / ನೀಳ್ಗವಿತೆ / ರುಗ್ಣ ಯಾಕುಬ

ರುಗ್ಣ ಯಾಕುಬ

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ
ಯಾರೆಂದು ಕೇಳಿದರೆ ಎಲ್ಲರೂ ಹೇಳುವರು-
ಅವನೇ ಯಾಕುಬ
ರುಗ್ಣ ಯಾಕುಬ
ಅವನ ಕತೆ ಕೇಳುವುದು
ನಾಕು ಜನ ಇರುವ ಕಡೆ-ಪ್ರಜಾ
ಜನರೆ ಅವನ ವಿರುದ್ಧ
ದಂಗೆಯೆದ್ದರು ಸಹಾ-ಆ
ದಂಗೆಯನು ಸದೆಬಡಿದು
ಅನೇಕರನು ಹಿಡಿದು
ಕೆಲವರನು ಕೂಡಲೇ
ಕೆಲವರನು ಆಮೇಲೆ

ಅಂಥವರ ನಡುವೊಬ್ಬ
ಮಾಂತ್ರಿಕನೂ ಇದ್ದ
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಒಂದು ದಿನ ಅಂಥವನ
ಸರದಿಯೂ ಬರಲಾಗಿ :
“ಯಾಕೆ ಸುಮ್ಮನೆ ನನ್ನ
ಕೊಲಿಸುವಿರಿ ? ಕೊಲಿಸಿದರೆ
ನಾ ಕಲಿತ ವಿದ್ಯೆಯೂ
ನನ್ನ ಜತೆ ಹೋಗಿ-
ಇಲ್ಲದಿದ್ದರೆ ನಿಮಗೆ
ಕುಳಿತಲ್ಲೆ ತೋರಿಸುವೆ
ಲೋಕದದ್ಭುತಗಳ
ಅಂಗೈಗೆ ತರಿಸುವೆ!”

ಆಗ ಯಾಕುಬನು
ರುಗ್ಣ ಯಾಕುಬನು :
“ಮಾತುಗಳು ಹಾಗಿರಲಿ
ತಂದು ತೋರಿಸು ನನಗೆ
ಲೋಕದಲೆ ಅತ್ಯಂತ
ಚೆಲುವಾದ ಕುದುರೆಗಳ
ಅಂಥ ದೃಶ್ಯಗಳ !”

ಬರೀ ಒಂದು ಹಿಡಿ ಕೊತ್ತಂಬರಿ
ಒಂದು ಮಣ್ಣಿನ ಪಾತ್ರೆ
ಬೆಂಕಿ, ಇದ್ದಿಲು, ಒಂದು
ಮಸಿಯ ಬುರುಡಿಯೂ
ಬರೆವ ಲೆಕ್ಕಣಿಕೆ
ಪ್ರತ್ಯೇಕ ಮರದ ಪತ್ರೆ

ಆಮೇಲೆ ಯಾಕುಬನ
ರುಗ್ಣ ಯಾಕುಬನ
ಅಂಗೈಲಿ ಮಸಿ ಬಿಂದು
ದುಂಡನೇ ನಿಂದು
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಮಂತ್ರಗಳ ಹೇಳುವನು
ಕುದುರೆಗಳ ಕರೆಯುವನು

ಕರೆದರೆ ಮೊದಲು
ವಿಶಾಲ ಬಯಲು
ಬಹುಶಃ ಏಶಿಯಾ
ಬಹುಶಃ ಆಫ್ರಿಕಾ
ಆಮೇಲೆ ಅದರ
ಅಂಚಿನಿಂದೆದ್ದು
ಬಂದಂತೆ ಮೋಡ
ಒಂದು ಸಾವಿರ ಘೋಡ
ಓಟದಲಿ ಮೈ-ಮಾಟದಲಿ
ಒಂದನ್ನೊಂದು ಮೀರಿ
ಈ ಕಡೆಗೇ ಸಾರಿ

ಆಮೇಲೆ ಮರುದಿನವು
ಪ್ರತಿದಿನವು ಹೀಗೆಯೇ
ಅದ್ಭುತ ನಗರಿಗಳು
ರಾಜ್ಯಗಳು ಕೋಶಗಳು
ವಿಶಾಲ ಸಮುದ್ರಗಳು
ಮರುಭೂಮಿಗಳು, ಇದೀಗ
ಅರಳಿದ ಗುಲಾಬಿಗಳು
ದೂರದ ಗ್ರಹಗಳೂ

ಪಿರಮಿಡಿನ ರಹಸ್ಯಗಳು
ದಾರಿತಪ್ಪಿದ ನೌಕೆಗಳು
ಯಾರೂ ಬಿಡಿಸದ ಒಗಟುಗಳು
ಸುಂದರ ಹೌರಿಗಳು
ಚರಿತ್ರೆಯ ಪ್ರಸಿದ್ಧ
ಹಾದರಗಳೂ, ಯುದ್ಧಗಳೂ

ವಿಚಿತ್ರ ಜಂತುಗಳು
ವಜ್ರ ವೈಡೂರ್ಯಗಳು
ಮಾತಾಡುವ ಮೀನುಗಳು
ಜನವಿರದ ಸಂತೆಗಳು
ವೇಶ್ಯೆಯರ ಪಡಖಾನೆಗಳು
ಅವರ ವಿನೋದಗಳೂ
ಹುಟ್ಟಿದಾಗಲೆ ನಗುವ ಶಿಶುಗಳೂ
ಕಡಲ ತಳ ಕಾದಿಟ್ಟ
ನಿಧಿಗಳೂ, ಎಷ್ಟೋ ಜನರ
ವಿಧಿಗಳೂ.

ಹೀಗಿತ್ತು. ಇರಲು
ದಿನದಿನದ ಮಾಯಾಬಜಾರ-
ದೊಳಗೆ ಬಯಸಲಿ ಬಯಸದೆ ಇರಲಿ
ಆಗಾಗ
ಬರುವ ಅಪರಿಚಿತ ವ್ಯಕ್ತಿ
ಮುಖವಾಡದಿಂದ ಮುಖ
ಪೂರ್ತಿ ಮುಚ್ಚಿ

ಉತ್ತರದಾತ, ತುಸು ಬಾಗಿರುವಾತ
ದಿರಿಸು ನೋಡಿದರೆ ಅರಬ
ಅಥವ ಅಂಥದೇ ಇನ್ನೊಬ್ಬ
ಯಾಕ ಈ ವೇಷ ?
ಯಾಕೆ ಮುಖವಾಡ ?
“ತೆಗೆದು ಬಿಸಾಕಲು ಹೇಳು !”
ಎಂದು ಯಾಕುಬ
ರುಗ್ಣ ಯಾಕುಬ

“ದುಡುಕಬಾರದು ನಾವು
ಯಾರೀತ, ಹೆಸರೇನು
ಯಾವ ದೇಶದವ- ಯಾರಿಗೂ
ತಿಳಿಯದೆ ಇರುವಾಗ
ತಿಳಿಯದಿರಲೆಂದೆ ಅಲ್ಲಾ ಅವನ
ಮುಖವ ಮುಚ್ಚಿರುವಾಗ”

ಬಾರಿ ಬಾರಿಗೂ ಯಾವುದೋ ಬದಿಯಿಂದ
ಮೂಡುತ್ತಿದ್ದ ವಿಚಿತ್ರ
ಕೆಲವೊಮ್ಮೆ ಕುದುರೆಯ ಮೇಲೆ ಆರೋಹಿ
ಕೆಲವೊಮ್ಮೆ ಹೇಸರಗತ್ತೆಯನೂ ಏರಿ
ಮರುಭೂಮಿಗಳ ಸಂಚಾರಿ
ದಾರಿ ಮರೆತಂತೆಯೂ ತೋರಿ
ಆದರೂ

ಅಂಗೈಯ ಕ್ರೌರ್ಯ
ಒಂದನ್ನೊಂದು ಮೀರಿ
ಮೂಡುತ್ತಿದ್ದುವು
ಯಾಕುಬನ
ರುಗ್ಣ ಯಾಕುಬನ-ಮರುಳು
ಮಾಡುತಿದ್ದವು

ದಿನ ದಿನದ ಕೊಲೆ, ಹಾದರ, ಬಲಾತ್ಕಾರ ಸಂಭೋಗ
ದಿನ ದಿನದ ಶಿಕ್ಷೆ. ಅಂಗಾಂಗ ಛೇದ
ದಿನ ದಿನದ ಅನುಭವದ ಕ್ರೂರ
ಸಾಕ್ಷಾತ್ಕಾರಕ್ಕೆ ಪೂರ್ತಿ ವಶವಾದ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...