ಬೆಂಕಿಬಿದ್ದ ಮನೆಗಳಿಂದ
ಅರೆಬೆಂದ ಹೆಣಗಳ
ಕಮಟು ವಾಸನೆ
ಉಸಿರುಗಟ್ಟಿಸುವ ಹೊಗೆ
ಮನೆಯೊಳಗಣ ಕಿಚ್ಚು
ಮನೆಯ ಸುಟ್ಟಿತಲ್ಲದೇ
ನೆರೆಮನೆಯ ಸುಡದು,

ಬೋಸ್ನಿಯಾದ
ಕ್ರೂರ ಬದುಕುಗಳು
ಸೋಮಾಲಿಯಾದ
ಆಸ್ತಿ ಪಂಜರಗಳು
ರಾಮನಾಮದಡಿಯಲಿ
ಚೂರಿ ಇರಿತಕ್ಕೆ ಸಿಕ್ಕು
ಎಲಿ ವಿಲಿ ಒದ್ದಾಡಿ,
ರಕ್ತದ ಮಡುವಿನಲ್ಲಿ
ಬಿದ್ದ ಭಾರತೀಯರ
ಕನಸುಗಳು.

ಹೆಂಗಸರ ಮಕ್ಕಳ ಗೋಳನ್ನು
ಹೃದಯ ವಿದ್ರಾವಕ ಕೂಗನ್ನು
ಕೇಳುವ ಹೃದಯಗಳು
ಆಗಲೇ ಅರ್ಥ ಕಳೆದುಕೊಂಡು,

ಕೋಮು ಬಣ್ಣ ಬಳಿದುಕೊಂಡು-
ಮಾನವೀಯತೆಯ ಮಾರಿಕೊಂಡು
ಶವಗಳ ಕೆದಕಿ ಕೆದಕಿ ಕೇಳುತ್ತಿವೆ.
ಈ ರಕ್ತ ಹಿಂದು ರಕ್ತ
ಈ ರಕ್ತ ಮುಸ್ಲಿಂ ರಕ್ತ
ರಕ್ತ ರಕ್ತ ಎಂದು
ಹಪಹಪಿಸುವ
ರಕ್ತ ಪಿಪಾಸುಗಳೇ
ರಕ್ತ ಬೀಜಾಸುರನ ವಂಶಜರೇ,

ಸತ್ತ ಶವಗಳ ಮಧ್ಯ
ಜಾತಿ ಹುಡುಕುವ ರಾಕ್ಷಸರೆ
ಸತ್ತು ಬಿದ್ದಿರುವ ಶವಗಳು
ಹಿಂದುವೂ ಅಲ್ಲ
ಮುಸ್ಲಿಂ ಕೂಡ ಅಲ್ಲ
ಅವು ಈ ದೇಶದ
ಅಸಂಖ್ಯಾತ ಬಡವರದಾಗಿವೆ.
*****