ಶಬುದಾ ಕೇಳಿದಿಯೇನೊ ನೀ
ಅಬುದಾ ನೋಡಿದಿಯೇನೊ ||ಪಲ್ಲ||

ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ
ಜೋರ್ಜೋರೋ ಜೋರೊ ಭಜನೀಯ ಸೂರೋ ||೧||

ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು
ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨||

ಮುಗಲಾಗ ಹಗಲಿಲ್ಲ ಜಗದಾಗ ನಗಿಯಿಲ್ಲ
ಕಂಬ್ಳ್ಯಾಗ ಸಂತ್ಯೋ ಗೊಂಗ್ಡ್ಯಾಗ ಚಿಂತ್ಯೋ ||೩||

ಗುಳ್ಳಡಕಿ ಗುಳಬುಟ್ಟಿ ಸುಳ್ಳಡಕಿ ಸಣಬುಟ್ಟಿ
ಸೆಗಣೀಯ ಬುಟ್ಟ್ಯೋ ನೀಹರಕು ತಟ್ಟ್ಯೋ ||೪||

ಸೂಳ್ಯಾರ ಸಂತ್ಯಾಗ ಗರತ್ಯಾರ ಪೇಟ್ಯಾಗ
ಮಿಂಡರ ಕುಚ್ಚೋ ಹಿಡಿದಂಟು ಹಚ್ಚೋ ||೫||

ತೀಮಿಂಗ್ಲ ತಿಣಿಕೈತಿ ಮಾಲಿಂಗ ಇಣಿಕೈತಿ
ತಂಪೀನ ತಂಪೋ ಇಂಪೀನ ಇಂಪೋ ||೬||
*****
ಶಬುದ=ಮನಸ್ಸಿನ ಸಮುದ್ರದ ಸಂಕಲ್ಪಗಳ ಕೋಲಾಹಲ; ಅಬುದ=ಮನಸ್ಸಿನ ಸಮುದ್ರದ ಅಂತರಂಗದ ಶಾಂತ ಸ್ಥಿತಿ.