ಹಿಂಡೇನೆ ಹಣ್ಣು ಹಿಂಡೇನೆ
ಉಂಡೇನೆ ಹೋಳ್ಗಿ ಉಂಡೇನೆ ||ಪಲ್ಲ||

ಗಿಣಿಮಾವು ಇನಿಮಾವು ಮಲಗಬು ಈಶಾಡಿ
ಆಪೂಸಿ ಪಡಪೋಸಿ ಹಿಂಡೇನೆ
ಜಿಬ್ರಣ್ಣು ಜೊಟ್ಟೆಣ್ಣು ಸೊಟ್ಟೆಣ್ಣು ಸವುಳಣ್ಣು
ಕಲ್ಮೀಯ ಕಡಮಾವು ಉಂಡೇನೆ ||೧||

ಗೋವೆಯ ಗುಳ್ಹಣ್ಣು ಮಲ್ಲಾಡ ಹುಳಿಹಣ್ಣು
ಬೆಳುವಲದ ಬೆಲ್ದಣ್ಣು ಹಿಂಡೇನೆ
ಗುಟ್ಟೆಣ್ಣು ಗುಳಬುಟ್ಟಿ ಕೇರ್‍ಮಾವು ಎಣಿಬುಟ್ಟಿ
ನೀಲಮ್ಮು ಮಗಿಮಾವು ಕುಡದೇನೆ ||೨||

ಸೋಗ್ಲಾಡಿ ಚಂದ್ಮಾವು ಗಿಡ್ಡಣ್ಣಿ ಅಡಿಕ್ಮಾವು
ಗೌರ್‍ಮಾವು ಬಾಳ್ಮಾವು ಚೀಪೇನೆ
ಉಪ್ಪಿನ ಕಾಯ್ಮಾವು ವಿಭೂತಿ ಹಿಟಮಾವು
ಎಳಮಾವು ಗಟಿಮಾವು ಹೆಚ್ಚೇನೆ ||೩||

ನೂರು ಸಾಸಿರ ಮಾವು ರುಚಿನೂರು ರಸನೂರು
ಕಡೆರಾತ್ರಿ ಶಿವರಾತ್ರಿ ಹಿಂಡೇನೆ
ಆರ್‍ಕೋಟಿ ನೂರ್‍ಕೋಟಿ ಕಲಿಕೋಟಿ ಕಡೆಮಾವು
ಸರಿರಾತ್ರಿ ಸೀಕರಣಿ ಕುಡಿದೇನೆ ||೪||
*****
ಮಾವಿನ ಹಣ್ಣುಗಳು=ಜಗತ್ತಿನ ನಾನಾ ಸಂಸ್ಕಾರಗಳ ಜನರು; ಹೋಳ್ಗಿ = ಪೃಥ್ವಿ; ಶೀಕರಣಿ ಊಟ = ಅಣುಯುದ್ಧ