ವ್ಯಥೆಗೊಂಡ ಮನಸೆ
ವ್ಯಥಾ ಏನು ಕನಸು?
ಇಲ್ಲಿಲ್ಲ ಶಾಂತಿ
ಎಲ್ಲೆಲ್ಲೂ ಕ್ರಾಂತಿ!
ಮನದೊಳಗಿರುವ ವೇದನೆಯನ್ನು
ತಿಳಿಯದು ಜಗವು ನಿಜವಿಹುದನು
ದುಃಖದ ಜ್ವಾಲೆ
ಬೇನೆಯ ಶೂಲೆ
ಚಿತ್ತವ ಸುಡುತಿದೆ
ಹೊತ್ತರಿಯದೆಯೆ. . . .!
ದೂರದ ಬೆಟ್ಟ ನೋಟಕೆ ಇಷ್ಟ
ಯಾರರಿವರು ನಿಜ ಮನಸಿನ ಕಷ್ಟ
ಶ್ರೇಷ್ಠನು ಎಂಬ
ಮನಸಿನ ಜಂಬ
ಸುಡುತಿದೆ ಅವನ
ಬಹುದಿನದಿಂದ….!
ಸ್ವಾರ್ಥದ ನೆರಳಲಿ ಜೀವಿಪ ಜಗವು
ಅರ್ಥವ ತಿಳಿಯದು ಬಾಳಿನ ನಿಜವು
ನೀರಿನ ಗುಳ್ಳೆ
ಬಾಳಿದು ಪೊಳ್ಳೆ;
ಕಾಣಲು ಸಿಗದು
ಚಣದೊಳು ಮರುಳೆ….!
ಸತ್ಯದ ಸೋಗು ಜೀವಿತವಾಗಿ
ಮಿಥ್ಯದ ಸೆಳತವು ಇರುವುದೆ ತಾಗಿ
ಜೀವಿಸಲೆಂದು ಆಟವಿದೆಲ್ಲ
ಜೀವಿಪ ಜಗವು ಹೇಳುವ ಸೊಲ್ಲ……
ಸಿಗದಯ್ಯೋ! ಶಾಂತಿ,
ಅಗಲದು ಭ್ರಾಂತಿ!
ಧರೆಯೊಳು ಇನಿತೂ
ದೊರೆಯದು ಶಾಂತೀ……
*****