ಯಾವ ಹಾಡ ಹಾಡಲಿ ನಿನಗೆ|
ಅದಾವ ಹಾಡ ಹಾಡಿ ಮಲಗಿಸಲಿ ಮಗುವೇ?||

ಜೋಗುಳವ ಹಾಡಲೆನಗೆ ಬರುವುದಿಲ್ಲ
ಸೋಬಾನೆ ಹಾಡ ನಾನು ಕೇಳಿಯೂ ಇಲ್ಲ|
ಇನ್ನಾವ ಹಾಡ ಹಾಡಿ ಮಲಗಿಸಲಿ?
ಬರಿಯ ಮುದ್ದುಸಿ ಮಲಗಿಸಲೆ ನಿನ್ನಾ?||

ನಿನ್ನ ತಾಯಿಯಹಾಗೆ
ಸಂಗೀತವೆನಗೆ ಬರುವುದಿಲ್ಲ|
ನಿನ್ನ ಅಮ್ಮ ಹಾಡುತಿದ್ದಹಾಗೆ
ಜೋಗುಳ ಹಾಡು ಬರುವುದಿಲ್ಲ||
ಅವಳು ಹಾಡೆ, ನಿನ್ನ ಕೂಡೆ
ನಾನು ಮಲಗುತ್ತಿದ್ದೆ|
ಆ ಭಾಗ್ಯವದು ನಮ್ಮಿಬ್ಬರಿಗೆ
ಕೈತಪ್ಪಿ ಹೋಯಿತು||

ಯಾರ ಶಾಪವೂ ಯಾವ ವಿಧಿಯಾಟವೊ
ಇನ್ನು ಮುಂದೆ ಉಳಿದರ್ಧ ಬಾಳಿಗೆ
ನೀನು ನನಗೆ, ನಾನು ನಿನಗೆ|
ನಮ್ಮ ಉಳಿದ ಬದುಕೇ ಹೀಗೆ
ನಾನೇ ನಿನಗೆ ನೀನೇ ನನಗೆ|
ಅವಳ ನೆನಪೊಂದೇ ದಾರಿದೀವಿಗೆ||
*****