ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ
ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು,
ಬೀದಿ ಬೀದಿಯ ಸುತ್ತಿ
ಬೊಗಳುತಿಹ ನಾಯಿಗಳ ಮುಂದೆ,
ನಗರ ಕಾಯುತಿಹ ಪೊಲೀಸರ ಹಿಂದೆ,
ಅಲೆದಲೆದು
ಶಿವನ ಗುಡಿಯ ಮುಂದೆ,
ದಾಸರ ಶಿವಕಥೆಯ ಚಪ್ಪರದಲ್ಲಿ
ಕ್ಷಣ ಹೊತ್ತು ನಿಂತು,
ನಡುರಾತ್ರಿಯಲ್ಲಿ
ಯಾವುದೋ ದರಿದ್ರ ಚಿತ್ರವ ನೋಡಿ,
ಕಂಡ ಹೋಟೆಲಿಗೆ ನುಗ್ಗಿ
ಕೇಳಿದ ಹಣವ ತೆತ್ತು
ತಣ್ಣನೆಯ ಕಹಿ ಕಾಫಿಯ ಕುಡಿದು
ಕಂಡ ಕಂಡ ಬೀದಿಗಳಲ್ಲಿ
ಗೊತ್ತುಗುರಿ ಇಲ್ಲದೆ ನಡೆದು,
ಕಾಸೆಲ್ಲಾ ಖರ್ಚಾಗಿ,
ತನುವೆಲ್ಲಾ ಸುಸ್ತಾಗಿ,
ಹರ ಹರ ಎನ್ನುತ್ತಾ ಮನೆ ಸೇರಿದಾಗ
ಕೊನೆಗೂ ದೊರೆಯಿತು ಕೈಲಾಸ ಮೋಕ್ಷ,
ಅಪ್ಪನ ಕೋಪದ ಕಪಾಳ ಮೋಕ್ಷ.
*****
೧೧-೦೩-೧೯೭೬