ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ
ಸಾಧುರಿಗೊಂದಿಸುವೇ                                      ||ಪ||

ಬೇಧವನಳಿದಾತ್ಮ ಭೋಧವ ತಿಳಿಯುತಾ
ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ                  ||೧||

ಕಾಲಕರ್ಮವ ತುಳಿದು ಕಾಲಿಲೆ ಒದ್ದು
ಮೂಲ ಮಾಯವನಳಿದು
ಆಲಿಗಳ ಬಲದಲ್ಲಿ ಬ್ರಹ್ಮನ
ಸಾಲು ಜ್ಯೋತಿಯ ಬೆಳಕಿನಿಂದಲಿ
ಮಾಲಿನೊಳಿಹ ಮೇಲು ಮೂರ್ತಿಯ
ಕೀಲವನು ಬಲ್ಲಂಥ ಮಹಿಮದ                            ||೨||

ಕ್ಲೇಶಪಾಶ ಕೆಡಿಸಿ ಮಾಯಾಂಗನೆಯಾ
ಆಸೆ ಎಲ್ಲವ ಬಿಡಿಸಿ
ದೋಷಭವದುರಿತನಾಶಾ
ಶಿಶುನಾಳೇಶನೊಳು ಮನ ಮುಳುಗಿ ನಿತ್ಯದಿ
ರಾಶಿ ತಾಪವ ತೊಳೆದು
ಕರ್ಮ ವಿವಂಶರೆನಿಸುವ ಭಾಸುರಾಗಿಹ                       ||೩||

****