ಹಗಲು ರಾತ್ರಿಯನ್ನದೇ ಮಳೆ ಸುರಿಯಿತು
ನಾನು ನೀನು ಮಾತಾಡಿಕೊಂಡಾಂತೆ

ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿ
ಮಾತಾಡುತ್ತಲೇ ನಾವು ನಕ್ಕು ಅತ್ತಂತೆ
ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ

ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆ
ನೂರು ಸಂಕಟ ನುಂಗಿಯೂ ನಕ್ಕಂತೆ ನಾವು
*****

ಮಳೆ ಸುರಿದಾಯ್ತು
ಹನಿಯುಂಡ ಭೂಮಿ
ನಿದ್ದೆ ಹೋಗಿದೆ
ಮೈಮುರಿಯುತ್ತಿದೆ ನೆಲ
ಪುಟಿದೇಳುತ್ತಿದೆ ಚಿಗುರು
ಪ್ರತಿ ಚಿಗುರಿನಲಿ
ತೇಲಿ ಬಂದಿದೆ
ನಿನ್ನದೇ ಬಿಂಬ
*****

ಮಾತಿಗೆ ಮಾತು ಬೆಸೆಯಿತು,
ಹೆಜ್ಜೆ ಹೆಜ್ಜೆಗೂ ಪ್ರೀತಿಯ ಹೂ ಅರಳಿದವು
ಶತಮಾನಗಳ ನೋವು ಹಾಡಾದವು
ಪಕ್ಕದಲ್ಲಿದ್ದ ಗಿಡಮರ ತಲೆದೂಗಿದವು
ಹಕ್ಕಿಗಳ ಕಣ್ನಲ್ಲಿ ದೀಪಬೆಳಗಿದವು
ಕುದಿಯುತ್ತಿದ್ದ ಹಗಲು ಸೆರಗು ಹಾಕಲು
ಇರುಳಲ್ಲಿ ದೀಪಗಳು ಬೆಳಕು ಚೆಲ್ಲಿದವು
*****

ವಾರಬಿಟ್ಟು ಸುರಿದ ಮಳೆಗೆ
ಉಲ್ಲಾಸದಿಂದ ನಕ್ಕಳು ಭೂತಾಯಿ
ಕಂಪೌಂಡ್ ಕಟ್ಟೆ ಮೇಲೆ ಕುಳಿತ
ಗುಬ್ಬಚ್ಚಿ ಹಿಂಡಿನ ಹರಟೆ
ಜಗುಲಿ ಒಳಗಿನ ಹೆಂಗಸರ ನಾಚಿಸಿತು
*****

ಮಳೆ ಸುರಿದಾಯ್ತು
ಹನಿಯುಂಡ ಭೂಮಿ
ನಿದ್ದೆ ಹೋಗಿದೆ
ಮೈಮುರಿಯುತ್ತಿದೆ ನೆಲ
ಪುಟಿದೇಳುತ್ತಿದೆ ಚಿಗುರು
ಪ್ರತಿ ಚಿಗುರಿನಲಿ
ತೇಲಿ ಬಂದಿದೆ
ನಿನ್ನದೇ ಬಿಂಬ
*****