ಭಾಷೆ ಸೂಕ್ಷ್ಮಗೊಳಿಸುವುದು ಕವಿಯ ಕರ್ತವ್ಯ

ಭಾಷೆ ಸೂಕ್ಷ್ಮಗೊಳಿಸುವುದು ಕವಿಯ ಕರ್ತವ್ಯ

ಎಚ್.ಎಸ್- ಶಿವಪ್ರಕಾಶ್ ಕನ್ನಡದ ಮಹತ್ವದ ಕವಿಗಳಲ್ಲೊಬ್ಬರು. ಕಾವ್ಯ, ರಂಗಭೂಮಿ, ಭಾಷಾಶಾಸ್ತ್ರ ಅಧ್ಯಾತ್ಮ, ದೇಸಿ ಜೀವನಪದ್ಧತಿ ಮುಂತಾದ ಆಸಕ್ತಿಗಳನ್ನು ಹೊಂದಿರುವ ಆವರು, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ‘ಆರ್‍ಟ್ಸ್ ಅಂಡ್ ಏಸ್ತೆಟಿಕ್ಸ್ ಸ್ಕೂಲ್’ನಲ್ಲಿ ಸಹ ಪ್ರೊಫೆಸರ್. ಅವರೊಂದಿಗಿನ ಮಾತುಕತೆಯ ಸಂಕ್ಷಿಪ್ತ ರೂಪ ಇಲ್ಲಿದೆ.

ಆಡಿಗರ ಕಾವ್ಯದಿಂದ ಪ್ರಭಾವಿತನಾಗಿದ್ದೇನೆ ಎಂದೊಮ್ಮೆ, ನನ್ನ ಕಾವ್ಯದಲ್ಲಿ ಅನುಭಾವದ ಪ್ರಭಾವವಿದೆ ಎಂದು ಇನ್ನೂಮ್ಮೆ ಹೇಳಿದ್ದಿರಿ? ಈ ಎರಡರ ಹೊಂದಾಣಿಕೆ ಹೇಗೆ?

ಇಪ್ಪತ್ತನೇ ಶತಮಾನದ ಕನ್ನಡ ಕವಿಗಳಲ್ಲಿ ಕುವೆಂಪು, ಆಡಿಗ ಹಾಗೂ ಕಂಬಾರ ನನ್ನ ಮೇಲೆ ಗಾಢ ಪ್ರಭಾವ ಬೀರಿದ ಕವಿಗಳು. ಕುವೆಂಪು ಕನ್ನಡ ಕಾವ್ಯಕ್ಕೆ ವಿಶ್ವಾತ್ಮಕ ಪ್ರಬುದ್ದತೆ ತಂದುಕೊಟ್ಟವರು. ಅಡಿಗರದು ನವ್ಯದ ಕಠೋರ ವಾಸ್ತವತೆಯ ಕಾವ್ಯ. ಇದಕ್ಕೆ ಪೂರಕವಾಗಿ ಕಂಬಾರರು ಕನ್ನಡ ಕಾವ್ಯಕ್ಕೆ ಗಾಢವಾದ ಪ್ರಾದೇಶಿಕ ವಿಶ್ವಾತ್ಮಕತೆ ತಂದುಕೊಟ್ಟರು.

ಅನುಭಾವ ಹಾಗೂ ಭಕ್ತಿ ಪರಂಪರೆಯ ಕಾವ್ಯ ಪ್ರಯೋಗಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಭಕ್ತಿ ಕಾವ್ಯಕ್ಕೆ ಸ್ವಚ್ಚಂದತೆಯನ್ನು ಸ್ವಾತಂತ್ರ್ಯವನ್ನು ತಂದುಕೊಡುತ್ತದೆ (ಉದಾಹರಣೆಗೆ ಬೇಂದ್ರೆ ಅವರ ಕಾವ್ಯ). ಆರರಿಂದ ಹದಿನೆಂಟನೇ ಶತಮಾನದವರೆಗೆ ಎಲ್ಲ ಭಾರತೀಯ ಭಾಷೆಗಳಲ್ಲೂ ಭಕ್ತಿಕಾವ್ಯವೇ ಜನರಕಾವ್ಯವಾಗಿದೆ. ವಚನದ ಭಾಷೆ ಅತ್ಯಂತ ಫ್ಲೆಕ್ಸಿಬಲ್ ಆಗಿದೆ.

ಕಾವ್ಯ ಆಧ್ಯಾತ್ಮವೂ ಅಲ್ಲ; ಅನುಭಾವವೂ ಅಲ್ಲ. ಅಭಿನವಗುಪ್ತ ಹೇಳಿದಂತೆ ಅಲೌಕಿಕ.

* ನಿಮ್ಮ ಕಾವ್ಯ ಅನೇಕ ಪ್ರಯೋಗಗಳ ಕೊಲಾಜ್? ಈ ಪ್ರಯೋಗಗಳ ಉದ್ದೇಶ?

ಟಿ.ಎಸ್. ಎಲಿಯಟ್ ಹೇಳಿದಂತೆ ಕವಿಯ ಕರ್‍ತವ್ಯ ಭಾಷೆಯನ್ನು ಎಲ್ಲ ರೀತಿಯಲ್ಲಿ ಸೂಕ್ಷ್ಮಗೊಳಿಸುವುದು. ಕನ್ನಡ ಕಾವ್ಯದಲ್ಲಿ ಭಾಷೆಯನ್ನು ಸೂಕ್ಷ್ಮಗೊಳಿಸುವ ಪ್ರಯೋಗಗಳು ಸಾಕಷ್ಟು ನಡೆದಿವೆ- ನವೋದಯ ಕವಿಗಳಲ್ಲಿ ಮುಖ್ಯವಾಗಿ ಬೇಂದ್ರೆ ಆವರಲ್ಲಿ ಈ ಪ್ರಯೋಗಶೀಲತೆ ಕಾಣಬಹುದು. ಹೊಸ ರೀತಿಯ ಸಾನೆಟ್ ಸೃಷ್ಟಿಸಿದ ಅವರು, ಅದನ್ನು ‘ಅಷ್ಟ ಷಟ್ಪದಿ’ ಎಂದು ಕರೆದರು. ಕುವೆಂವು ಶೈಲಿಯನ್ನು ಶಾಸ್ತ್ರೀಯ ಶೈಲಿ ಎಂದು ಕರೆದರೂ ಅವರ ‘ರಾಮಾಯಣ ದರ್ಶನಂ’ ಅನೇಕ ಕಾವ್ಯ ಪರಂಪರೆಗಳ ಕೃತಿ.

ನವ್ಯರಲ್ಲಿ ಅಡಿಗ- ಕಂಬಾರನ್ನು ಬಿಟ್ಟರೆ ಉಳಿದವರು ವ್ಯಕ್ತಿಗತ ವಿಶಿಷ್ಟ ಭಾಷೆಗೆ ಒತ್ತುನೀಡಿದರು; ಭಾಷೆಯನ್ನು ಸಂಕ್ಷಿಪ್ತಗೊಳಿಸುವ ತೀವ್ರ ಪ್ರಯತ್ನ ನಡೆಸಿದರು. ಇದರಿಂದ ವೈವಿಧ್ಯತೆ ನಷ್ಟವಾಯಿತು. ನವ್ಯರ ಕಾಲದಲ್ಲಿ ಭಾಷೆ ಹೆಚ್ಚು ಸೂಕ್ಷ್ಮವಾಯಿತೇ ಹೊರತು ವೈವಿಧ್ಯ ಕಳೆದುಕೊಂಡಿತು. ಆದರೆ, ಆಡಿಗರು ಹೆಲವು ರೀತಿ ಭಾಷಿಕ ಪ್ರಯೋಗ ನಡೆಸಿದರು. ಆವರ ಭಾಷೆ ಶ್ರೀಮಂತವಾದುದು, ಬಹು ಸಾಧ್ಯತೆಗಳನ್ನು ಒಳಗೊಂಡಿರುವಂತಹದ್ದು. ನನ್ನ ಜವಾಬ್ದಾರಿ ಕಾವ್ಯಭಾಷೆಗಳ ಅನೇಕತೆಯನ್ನು ಕಾವ್ಯಕ್ಕೆ ತರುವುದು. ಇದನ್ನು ನಾಟಕದಲ್ಲೂ ತಂದಿದ್ದೇನೆ. ಪ್ರಯೋಗ ಪ್ರಯೋಗಕ್ಕಾಗಿಯಲ್ಲ. ನನ್ನ ಕಾವ್ಯದ ಮಟ್ಟಿಗೆ ವಸ್ತು ಬದಲಾದ ಹಾಗೆ ಶೈಲಿಯೂ ಬದಲಾಗಿದೆ.

* ಕಾವ್ಯದ ಫಸಲು ಹುಲುಸಾಗಿದ್ದರೂ ಪ್ರಮುಖ ಕವಿ ಎನ್ನುವಂಥವರು ಈಗ ಕಾಣುತ್ತಿಲ್ಲ ಕಾರಣ ಏನಿರಬಹುದು?

ಹಠದಿಂದ ಶ್ರೇಷ್ಟ ಕವಿಯಾಗಲಿಕ್ಕೆ ಸಾಧ್ಯವಿಲ್ಲ. ಕವಿಯನ್ನು ಓದುಗರು, ಪರಂಪರೆ ಗುರ್ತಿಸಬೇಕು. ಈ ರೀತಿ ಗುರ್ತಿಸುವುದು ಕವಿಯ ಕೆಲಸ ಅಲ್ಲ. ಹೆಚ್ಚು ಜವಾಬ್ದಾರಿ ಹಾಗೂ ಬದ್ದತೆಯಿಂದ ಕಾವ್ಯ ರಚನೆ ಮಾಡುವುದಷ್ಟೇ ಕವಿಯ ಕೆಲಸ. ಬದಲಾಗುತ್ತಿರುವ ಸಂವೇದನೆ, ಅನುಭವ ಸತ್ಯಗಳನ್ನು ಯಾರು ಹೆಚ್ಚು ಅಧಿಕೃತವಾಗಿ ಭಾಷೆಯಲ್ಲಿ ವ್ಯಕ್ತಪಡಿಸುತ್ತಾರೆ, ಅನ್ವೇಷಿಸುತ್ತಾರೆ, ಅವರು ಪರಂಪರೆಗೆ ಮುಖ್ಯ. ‘ತೊರವೆ ರಾಮಾಯಣ’ಕ್ಕಿಂತ ‘ಕುಮಾರವ್ಯಾಸ ಭಾರತ’ ನಮಗೆ ಮುಖ್ಯವಾಗುವುದು ಇದೇ ಕಾರಣಕ್ಕೆ. ವಿಜಯನಗರ ಸಾಮ್ರಾಜ್ಯದ ಅನೇಕ ಒಳಸತ್ಯಗಳು ಕುಮಾರವ್ಯಾಸನ
ಕೃತಿಯಲ್ಲಿವೆ.

ಚಿಕ್ಕಂದಿನಲ್ಲಿ ಕವಿ ಆಗುವುದು ನನ್ನ ಮಹತ್ಯಾಕಾಂಕ್ಷೆ ಆಗಿರಲಿಲ್ಲ. ಭೂವಿಜ್ಞಾನಿ/ ಕೃಷಿ ವಿಜ್ಞಾನಿ ಆಗುವುದು ನನ್ನ ಹಂಬಲವಾಗಿತ್ತು. ಕವಿ ಆದುದು ಆಕಸ್ಮಿಕವಾಗಿ.

* ದೆಹಲಿಯಲ್ಲಿದ್ದೀರಿ. ಕನ್ನಡದ ನುಡಿಗಟ್ಟನಿಂದ ದೂರವಿರುವುದು ಕಾವ್ಯದ ದೃಷ್ಟಿಯಿಂದ ಅಪಾಯಕಾರಿ ಅನ್ನಿಸೊಲ್ಲವಾ?

ನುಡಿಗಟ್ಟಿನಿಂದ ದೂರ ಇರುವುದರಿಂದ ಕವಿಗೆ ತೊಂದರೆ ಆಗಬಹುದು. ಎ.ಕೆ ರಾಮಾನುಜಂ ಕನ್ನಡ ಪರಿಸರದಿಂದ ದೂರ ಇರದಿದ್ದರೆ ಬಹುಶಃ ಅಡಿಗರಷ್ಟೇ ಕವಿ ಆಗುತ್ತಿದ್ದರು. ಹೊರನಾಡ ಕವಿಗಳ ಭಾಷೆ ಕನ್ನಡ ನುಡಿಗಟ್ಟಿನಿಂದ ದೂರವಾಗಿ, ಅವರ ಕಾವ್ಯ ಮಿಸಲಭಾಜಿ ಭಾಷೆಯಾಗಿರುವುದನ್ನು ಗಮನಿಸಿದ್ದೇನೆ. ಆದರೆ ನನ್ನ ವಿಷಯದಲ್ಲಿ ಹಾಗಾಗಿಲ್ಲ. ಕಾವ್ಯಭಾಷೆಯ ಮೇಲೆ ನನ್ನ ಹಿಡಿತ ಸಾಕಷ್ಟು ಆದಮೇಲೆಯೇ ನಾನು ಕರ್ನಾಟಕ ಬಿಟ್ಟದ್ದು. ನಾನು ದೆಹಲಿಗೆ ಹೋದದ್ದು ೪೫-೪೬ನೇ ವಯಸ್ಸಿನಲ್ಲಿ ೩೦ ವರ್ಷದ ನಂತರ ವ್ಯಕ್ತಿತ್ವದ ಚೌಕಟ್ಟು ಹೆಚ್ಚೂಕಡಿಮೆ ಪೂರ್ಣ ಆಗಿರುತ್ತೆ.

ಕಾವ್ಯಭಾಷೆಯ ಬಗ್ಗೆ ನಾನು ವಿಶೇಷ ಎಚ್ಚರ ವಹಿಸಿದ್ದೇನೆ. ಅವಕಾಶ ಸಿಕ್ಕಾಗ ಕರ್ನಾಟಕಕ್ಕೆ ಭೇಟಿಕೊಡುತ್ತೇನೆ. ಕೆಲಸ ಇದ್ದರೆ ಮಾತ್ರ ಬೆಂಗಳೂರಿನಲ್ಲಿ ಉಳಿದುಕೊಳ್ಳುವೆ. ಉಳಿದಂತೆ ರಾಜ್ಯದ ಒಳಪ್ರದೇಶಗಳಿಗೆ ಛೇಟಿ ಕೊಡಲು ಇಷ್ಪಡುತ್ತೇನೆ. ಅಲ್ಲಿನ ಭಾಷಾ ಪ್ರಯೋಗವನ್ನು ಎಚ್ಚರದಿಂದ ಕೇಳಿಸಿಕೊಳ್ಳುತ್ತೇನೆ. ಭಾಷೆಯಲ್ಲಿ ತಲೆಮಾರಿನ ಅಂತರ ಇದೆ. ಸುಮಾರು ೧೦ ವರ್‍ಷಕ್ಕೊಮ್ಮೆ ಭಾಷೆಯಲ್ಲಿ ಬದಲಾವಣೆ ಕಾಣುತ್ತದೆ. ಇಂದಿನ ಎಫ್‌ಎಂ ಭಾಷೆಯೇ ತೀರಾ ಬೇರೆಯಾದುದು. ಇಂಥ ಸೂಕ್ಷ್ಮಗಳನ್ನು ಕವಿ ಗಮನಿಸಬೇಕು. ನನಗೆ ಭಾಶಾಶಾಸ್ತ್ರದ ಬಗ್ಗೆ ಕುತೂಹಲವೂ, ಕೊಂಚ ತರಬೇತಿಯೂ ಇದೆ. ಇತರ ಭಾರತೀಯ ಭಾಷೆಗಳ ಹಾಗೂ ಇಂಗ್ಲಿಷ್ ಕಾವ್ಯದ ಪರಿಚಯ ಸ್ವಲ್ಪ ಇದೆ. ಕನ್ನಡದ ವಿಶಿಷ್ಟ ನುಡಿಗಟ್ಟಿನ ಬಗ್ಗೆ ಬಹಳ ಕಾಲದಿಂದ ಅಧ್ಯಯನ ನಡೆಸುತ್ತಿದ್ದೇನೆ.

* ‘ಸಮಯದ ಸಮಸ್ಯೆ’ ಇಂದು ಎಲ್ಲರ ಅಳಲು. ಧಾವಂತದ ಬದುಕಿನಲ್ಲಿ ನೀವು ಕವಿತೆಗೆ ಬೇಕಾದ ಏಕಾಂತ-ಏಕಾಗ್ರತೆಯನ್ನು ಹೇಗೆ ದೊರಕಿಸಿ ಕೊಳ್ಳುವಿರಿ?

ಕವಿತೆಗೆ ಏಕಾಂತ ಲೋಕಾಂತ ಎರಡೂ ಬೇಕು. ಒಳಹೋಗುವ ಹಾಗೂ ಹೊರಮುಖಿ ಆಗುವ ವಿರುದ್ದ ಪ್ರಕ್ರಿಯೆಗಳು ಪ್ರಜ್ಞೆಯ ಎರಡು ವ್ಯಾಪಾರಗಳು. ಈ ಪ್ರಕ್ರಿಯೆ ಕಾವ್ಯದಲ್ಲೂ ಬರುತ್ತೆ. ಸಮಯ ಕವಿತೆಗೆ ಬಹಳ ಮುಖ್ಯ. ಕವಿತೆಯ ಜೀವ ಅಂದ್ರೆ ಲಯ (ಆರ್ಟ್ ಆಫ್ ಟೈಮ್. ಚಿತ್ರಕಲೆ ಆರ್ಟ್ ಆಫ್ ಸ್ಪೇಸ್). ಲಯ ಕಾಲಾಧಾರಿತವಾದದ್ದು. ಸಂಗೀತ ಮತ್ತು ಕಾವ್ಯ ಕಾಲದ ಕಲೆಗಳು. ಕಾಲವನ್ನು ನಿರ್ವಹಿಸುವುದು ಬಹಳ ಮುಖ್ಯ. ಸಮಯದ ಅಭಾವ, ವೇಗ ಎರಡನ್ನೂ ಕವಿ ಎದುರಿಸುವುದು ಅನಿವಾರ್ಯ. ಕಾಲವನ್ನೇ ಕಲೆಯಾಗಿಸುವುದು ಕವಿಗೆ ಅಡಚಣೆಯೂ ಹೌದು, ಸವಾಲೂ ಹೌದು. ನನ್ನ ಮಟ್ಟಿಗೆ ಇದು ಸವಾಲು.

* ಮುಂದಿನ ತಲೆಮಾರಿಗೆ ಕವಿತೆಯನ್ನು ತಲುಪಿಸೋದು ಹೇಗೆ?

ಕಾವ್ಯ ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಜಾಗತೀಕರಣವನ್ನು ನಾನು ‘ಗೋಳೀಕರಣ’ ಎನ್ನುತ್ತೇನೆ. ಈ ಗೋಳೀಕರಣ ಪ್ರಕ್ರಿಯೆಯಿಂದ ಎಲ್ಲ ಭಾಷೆಗಳ ಮೇಲೆ ವಿಶ್ವ ಯಜಮಾನಿಕ ಭಾಷೆ ಇಂಗ್ಲಿಷ್ ದಬ್ಬಾಳಿಕೆ ಹಚ್ಚುತ್ತಿದೆ. ನಮ್ಮ ಭಾಷೆ ಉಳಿಸಿಕೊಳ್ಳದಿದ್ದರೆ ಆ ಭಾಷಿಕ ಜನಾಂಗ ಪ್ರಬಲ ಭಾಷೆಯ ಅಜಗರ ಗರ್ಭ ಸೇರುತ್ತೆ. ಅಂಧಾಭಿಮಾನದಿಂದ ಭಾಶೆಯನ್ನು ಉಳಿಸುವುದು ಸಾಧ್ಯ ಆಗೊಲ್ಲ. ಸಿನಿಮಾ, ಗೀತೆಗಳ ಕನ್ನಡ ಯಾವ ರೀತಿ ಇರುತ್ತೆ? ಇಲ್ಲಿ ಭಾಷೆ ಸರಕಿನ ರೀತಿ ಬಳಸಲಾಗುತ್ತೆ. ಮನರಂಜನಾ ಕನ್ನಡಕ್ಕೆ ಭಾಷೆಯ ಸೂಕ್ಷ್ಮಗಳಾಗಲೀ, ಚಿಂತಕ ಭಾಷೆಯ ಅನ್ವೇಷಕ ಶಕ್ತಿಯಾಗಲೀ ಇಲ್ಲ. ಭಾಷೆಗೆ ಸಮಾಜದಲ್ಲಿ ಗೌರವ ಇಲ್ಲದಿದ್ದಾಗ, ಉದರಂಭರಣಕ್ಕೆ ಸಾಕಾಗುವಷ್ಟು ಗಳಿಕೆಯನ್ನು ಭಾಷೆ ಗಳಿಸಿಕೊಡದಿದ್ದಲ್ಲಿ ಆ ಭಾಷೆಯನ್ನು ಆತ್ಮತೃಪ್ತಿಗೆ ಬಳಸಿ ಎಂದು ಹೇಳಲು ಸಾಧ್ಯವಿಲ್ಲ. ಕನ್ನಡ ಆಡಳಿತದಲ್ಲಿ, ಸೃಜನಶೀಲತೆಯಲ್ಲಿ ಬಳಕೆಯಾಗಬೇಕು. ಕ್ಲಾಸಿಕ್‍ಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೀತಾ ಇದೆ. ಕೆ.ಎಸ್. ನರಸಿಂಹಸ್ವಾಮಿ ಒಂದು ಮಾತು ಹೇಳಿದ್ದರು: ‘ಕನ್ನಡ ಮಾಧ್ಯಮವಾಗಬೇಕು ಕನ್ನಡ ಮಕಳಿಗೆ/ ಕನ್ನಡ ಮಾಧ್ಯಮವಾಗಲೇಬೇಕು ಮೊದಲೀ ಕನ್ನಡ ಕವಿಗಳಿಗೆ’. ಅವರ ಮಾತು ನಿಜ. ಭಾಷೆ ಎಲ್ಲಿ ಮೊಂಡಾಗಿರುತ್ತದೆಯೋ ಅಲ್ಲಿ ಅದನ್ನು ನಿಶಿತಗೊಳಿಸುವುದು, ಎಲ್ಲಿ ಶಿಥಿಲವಾಗಿರುತ್ತದೆಯೋ ಅಲ್ಲಿ ಅದಕ್ಕೆ ಪ್ರಾಣ ತುಂಬುವುದು ಕವಿಯ ಜವಾಬ್ದಾರಿ.

* ಈಗ ಏನು ಬರೀತಿದ್ದೀರಿ?
ಹೊಸ ಸಂಕಲನ ತರುವಷ್ಟು ಕವಿತೆಗಳಿವೆ. ಇಂಗ್ಲಿಷ್‍ಗೆ ಅನುವಾದಿಸಿದ ವಚನಗಳ ಸಂಕಲನವನ್ನು ಪ್ರಕಟಿಸುವ ಉದ್ದೇಶವಿದೆ. ರಂಗಭೂಮಿಗೆ ಸಂಬಂಧಿಸಿದ ಲೇಖನಗಳು ಹಾಗೂ ವಿಮರ್ಶಾ ಲೇಖನಗಳ ಸಂಕಲನ ಪ್ರಕಟಣೆಗೆ ಸಿದ್ದವಾಗಿದೆ. ಕೃಷ್ಣನ ಜೀವನದ ಅಂತಿಮ ಘಟ್ಟದ ಕುರಿತು ನಾಟಕ ಬರೆಯುವುದು ನನ್ನ ಬಹಳ ವರ್ಷಗಳ ಯೋಜನೆ. ಅಂಬೇಡ್ಕರ್-ಗಾಂಧಿ ಸಂಘರ್ಷದ ಕುರಿತು ನಾಟಕ ರಚಿಸುವ ಆಸೆಯಿದೆ. ‘ಮಹಾಚೈತ್ರ’ದ ಮುಂದುವರಿದ ಭಾಗವಾಗಿ, ‘ಮಹಾಶಿಶಿರ’ ಎನ್ನುವ ನಾಟಕ ಬರೆಯಬೇಕೆಂದು ಕೊಂಡಿದ್ದೇನೆ. ಅಲೆಮಾರಿ ಜನಾಂಗದ ವಚನಕಾರರ ಮೇಲೆ ಸುಧಾರಣಾ ಚಳವಳಿಯ ಪರಿಣಾಮವನ್ನು ಈ ನಾಟಕದಲ್ಲಿ ಚಿತ್ರಿಸುವುದು ನನ್ನ ಉದ್ದೇಶ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾವಾಗ
Next post ಎಂದೆಂದೂ ಮುಗಿಯದ ಕತೆ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys