ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ
ಹಾಸಿಗಿ ಹಾಸಾಕ ನಿಂತೇನ ||ಪಲ್ಲ||

ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ
ಮಖಮಲ್ಲು ಹಾಸೀಗಿ ಮಾಡ್ತೇನ
ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ
ಬೆಚ್ಚಂಗ ಕುತನೀಯ ಹಾಕ್ತೇನ ||೧||

ದೇವರಾ ಹೆಸರಾಗ ದೇವಕಿ ಬಸರಾದ್ರ
ಬಾಣೆಯತನಕಾನು ನಿಲ್ತೇನ
ಎಣ್ಹೆಚ್ಚಿ ಎರಿತೇನ ಕ್ಯಾದೀಗಿ ಕಟತೇನ
ಬಾಗಲಾ ಕಿಡಕಿಯ ಮುಚತೇನ ||೨||

ತಲಬಾಗ್ಲ ಮುಚತೇನ ತಲವಾರ ಹಿಡಿತೇನ
ದೇವರು ಮಲಗ್ಯಾರು ಅಂತೇನ
ಬಂದೋರ್‍ಗೆ ಹೋದೋರ್‍ಗೆ ಅಂಗಾರ ಕೊಡತೇನ
ಕುಂಟಲಗಿತ್ಯ್ತಾನು ಕುಣಿತೇನ ||೩||

ಗಂಟೀಯ ಬಡದೇನ ಗಂಟನ್ನು ಹೊಡದೇನ
ಹಾದರಕ ಹೂಹಾರ ಹಾಕ್ತೆನ
ನೂರಾರು ಗರತೇರ ಗೆಣಿಯಾಗ ತರತೇನ
ಪುಗಸಟ್ಟೆ ಪಾನಕ ಕುಡಿತೇನ ||೪||

ಹಲಕಟ್ಟ ಈ ಕಟಿಗಿ ಹರಕು ತಟ್ಟಲಿ ಕಾಮಿ
ಚೌರೀಯ ಚಾಮರಾ ಬೀಸ್ತೇನ
ದಡ್ಡರಿಗೆ ದಡ್ಮಾಡಿ ಕುಡ್ಡರಿಗೆ ಕುಡ್ಮಾಡಿ
ದೊಡ್ಡೋರ ಅಂಗಡಿ ಕಾಯೇನ ||೫||
*****
ಈ ಕಟಿಗಿ = ಈ ಪೆನ್ನು, ಈ ದೇಹ