ಆ ದೇವರಿತ್ತ ಈ ವರವ
ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ|
ನಿನ್ನ ಒಳಿತಿಗಾಗೆನ್ನ
ಜೀವನವ ಮೀಸಲಿಡುವೆ|
ಓ ನನ್ನ ಮಗುವೇ||

ಎಷ್ಟೇ ಕಷ್ಟವು ಬಂದರೆ ನನಗೆ
ನೆರಳಾಗಿ ನಾನಿರುವೆ ನಿನ್ನ ಜೊತೆಗೆ|
ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ
ತಾಯಿಯ ಪ್ರೀತಿಯನೆಲ್ಲವಾ
ಧಾರೆಯೆರೆಯುವೆ ನಿನಗೆ|
ಉಳಿದಿರುವೆ ನೀನೊಬ್ಬಳೆ
ನನ್ನಯ ಪಾಲಿಗೆ|
ನಾಳಿನ ಭರವಸೆ ನೀನೆನಗೆ||

ಚಿಂತಿಸದಿರು ನೀ
ಅಪ್ಪನಾ ನೆನೆ ನೆನೆದು
ಅದೃಷ್ಟವದು ಕೈ ಬಿಟ್ಟಿತು ನಮಗೆ|
ಅಮ್ಮ ಅಪ್ಪನು ನಾನಾಗಿ
ಬೆಳೆಸುವೆ ಈ ನಿನ್ನನು|
ನನ್ನ ಬದುಕು ನಿನಗಾಗೆ
ನಿನ್ನ ಒಂದೊಂದು ನಗೆ
ಕೋಲ್ಮಿಂಚ ಬೆಳಕು ನನ್ನ
ಈ ಕಾಳಿರುಳ ಬಾಳಿಗೆ|
ನಿನ್ನ ತುಂಟತನವೇ ಚೇತನ
ನನ್ನ ಜಡತ್ವದ ಜೀವನ ಹಾದಿಗೆ||

ನಾಳಿನ ಭರವಸೆಯಲಿ ಬದುಕೋಣ
ಆ ದೇವರ ನಂಬುತಲಿ ಸಾಗೋಣ||
*****