ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ–
ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ-
ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ
ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ
ಬದುಕುವ ಒಂದೊಂದು ಉಪಾಯವನವನು
ಕರುಣಿಸುವನಯ್ಯ! ಕೆಲವರನು ಕುಣಿಸುವನು
ಕೆಲವರನು ಮಣಿಸುವನು ಕೆಲವರನು ಪಲ್ಲಂಗದಲ್ಲಿ
ಕೂರಿಸುವನು ಕೆಲವರನು ಬಿಸಿಲಲಿ ನಿಲ್ಲಿಸುವನು

ಇನ್ನು ಕೆಲವರಿಗೆ ಅಡಿಯಿಂದ ಮುಡಿವರೆಗೆ
ಬಣ್ಣವ ಹಚ್ಚಿ ಮೇಲೆಲ್ಲ ಅಭ್ರಕದ ಹುಡಿ ಅರಚಿ
ತಲೆಯ ಶಿಖರದಲ್ಲಿ ಮಯಣದಲೊತ್ತಿ ತಿರುವಿದ ಜುಟ್ಟು
ಕೈಯ ಕೆಳಗೊಂದು ದಂಡವನಿಟ್ಟು ಬಿಟ್ಟು
ಕುಳಿತುಕೊಳ್ಳಿಸುವನು ಖಾನಾವಳಿಯ ಮುಂದೆ-ಇಲ್ಲ
ಹುಲ್ಲ ಮೇಯಿಸನಯ್ಯ ನೆಲ್ಲನೂ ಮೇಯಸನು
ಸಂಜೆ ವೇಳೆಗೆ ಕರುಣಿಸುವನು ದಿನದ ಪಗಾರ
ದಾಟಲು ಸಂಸಾರ ಸಾಗರದ ನಿತ್ಯ ಅಪರಂಪಾರ

ಎಲ ಎಲಾ ಛೋಟೀವಾಲ! ಏನಿದು ಜೀವಜಾಲ!
ಅವಧೂತನೆ ದೇವರ ಅತಿಕೊನೆಯ ದೂತನೆ
ಮಹಾತ್ಮನೆ ಸಾಕ್ಷಾತ್ ಪರಮಾತ್ಮನೆ ನಮಸ್ಕಾರ
ದಾಟಿಸುವೆಯ ನನ್ನ ಗಂಗಾನದಿಯ ಪಾರ?
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)